ಕಾನೂನು ವಿರುದ್ಧದ ಹೋರಾಟ ಸರಿಯಾದ ಬೆಳವಣಿಗೆಯಲ್ಲ: ನ್ಯಾ.ಮೋಹನ ಶಾಂತನಗೌಡರ್

Update: 2019-09-09 18:29 GMT

ಬೆಂಗಳೂರು, ಸೆ.9: ಕಾನೂನು ವಿರುದ್ಧದ ಹೋರಾಟ ಮತ್ತು ಸಂಘರ್ಷ ಸರಿಯಾದ ಬೆಳವಣಿಗೆಯಲ್ಲ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಮೋಹನ ಎಂ. ಶಾಂತನಗೌಡರ್ ಹೇಳಿದ್ದಾರೆ. 

ಸೋಮವಾರ ಬೆಂಗಳೂರಿನ ದಂಡಾಧಿಕಾರಿಗಳ ಹೆಚ್ಚುವರಿ ನ್ಯಾಯಾಲಯಗಳ ಕಟ್ಟಡ ಉದ್ಘಾಟನೆ ಹಾಗೂ ಕಟ್ಟಡದ 2ನೆ ಹಂತದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಇತ್ತೀಚೆಗೆ ಮಾತು ಮಾತಿಗೆ ಜಗಳ, ಪ್ರತಿಭಟನೆ ನಡೆಸಲಾಗುತ್ತಿದೆ. ಸಮಾಜದಲ್ಲಿ ಒಂದು ವಿಷಯದ ಕುರಿತು ವಾದ ಪ್ರತಿವಾದ ನಡೆಸಲಾಗುತ್ತಿದ್ದು, ಇದ್ಯಾವುದರ ಅಗತ್ಯವಿಲ್ಲ. ಒಂದು ವಿಷಯವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಿಳಿದುಕೊಂಡಿರುತ್ತಾರೆ. ಹೀಗಾಗಿ ಅವರವರ ಭಾವಕ್ಕೆ ಅದು ಸರಿಯಾಗಿರುತ್ತದೆ. ಹೀಗಾಗಿ ಪರಸ್ಪರ ಏನೇ ಸಮಸ್ಯೆಗಳು ಇದ್ದರೂ ಸಹ ಹೊಂದಾಣಿಕೆ ಮಾಡಿಕೊಂಡು ಯಾವುದು ಸತ್ಯ ಎಂಬುವುದರ ಕುರಿತು ಮುಕ್ತ ಸಮಾಲೋಚನೆ ಮಾಡುವ ಅವಶ್ಯಕತೆಯಿದೆ ಎಂದರು.

ಜೀವನ ಒಂದೇ ಬಾರಿ ಸಿಗುವಂತದ್ದು, ಆರೋಗ್ಯದ ದೃಷ್ಟಿಯಿಂದ ಉತ್ತಮ ಜೀವನ ನಡೆಸಬೇಕು. ಇದೊಂತರಾ ಎನ್‌ಸಿಸಿ ಪೆರೇಡ್ ಇದ್ದಂತೆ. ಇಂದು ಮೊದಲ ಸ್ಥಾನದಲ್ಲಿದ್ದವನು, ನಾಳೆ ಕೊನೆಯ ಸ್ಥಾನಕ್ಕೆ ಬರಬಹುದು. ಇಲ್ಲಿ ನಾನೇ ಶ್ರೇಷ್ಠ ಎಂದರೆ ಆಗೋದಿಲ್ಲ. ಜೀವನ ಹೇಗೆ ತಿರುವು ಪಡೆಯುತ್ತದೆಯೋ ಹೇಳಲು ಸಾಧ್ಯವಿಲ್ಲ. ಜೀವನದಲ್ಲಿ ಅಧಿಕಾರ, ಅವಕಾಶಗಳು ತಾತ್ಕಾಲಿಕವಾಗಿದ್ದು, ನ್ಯಾಯಾಧೀಶರು ಸೇರಿದಂತೆ ಯಾರಾದರೂ ಸರಿ, ಯಾವುದನ್ನೂ ಶಾಶ್ವತ ಎಂದು ತಿಳಿಯದೆ ಅಲ್ಲೇ ಮರೆತು ಬರುವಂತ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವಕೀಲರು, ನ್ಯಾಯಾಧೀಶರು ಜಾಣರಿದ್ದಾರೆ. ಆದರೆ ಕೆಲವು ಜನ ಸ್ವಲ್ಪವೇಗವಾಗಿ ಕೆಲವರು ನಿಧಾನವಾಗಿರುತ್ತಾರೆ. ಎಲ್ಲರೂ ಬುದ್ಧಿವಂತರು ಎನ್ನಲಾಗದು. ಆದರೆ ಜೀವನವೇ ಒಂದು ಹೊಂದಾಣಿಕೆಯ ಸಮ್ಮಿಲನ. ಹೀಗಾಗಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಜೀವನದಲ್ಲಿ ಚೆನ್ನಾಗಿದ್ದರೆ ಸುಳ್ಳು ಹೇಳುವ ಅಗತ್ಯವಿಲ್ಲ. ವಕೀಲರು, ನ್ಯಾಯಾಧೀಶರು ಕೈಯಲ್ಲಿ ಏನಿದೆ. ಹೀಗಾಗಿ ನಮ್ಮ ಮುಂದೆ ಪ್ರಕರಣ ಬಂದಾಗ ಉತ್ತಮ ತೀರ್ಮಾನ ಪ್ರಕಟಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಇತ್ತೀಚೆಗೆ ಅತ್ತೆ-ಸೋಸೆ, ಗಂಡ-ಹೆಂಡತಿ ಜಗಳದ ಪ್ರಕರಣಗಳು ಹೆಚ್ಚಾಗುತ್ತಿವೆ. ಇವೆಲ್ಲ ಯಾಕೆ ಎಂದು ತಿಳಿಯುತ್ತಿಲ್ಲ. ಮುಂದೊಂದು ದಿನ ನಮ್ಮ ಮಗಳು ಬೇರೆಯವರ ಮನೆಯ ಸೊಸೆಯಾಗಬೇಕಿರುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ಸೊಸೆಯನ್ನು ಮಗಳಂತೆ ನೋಡಿಕೊಂಡರೆ ಈ ಯಾವ ಪ್ರಶ್ನೆಗಳು ಉದ್ಭವಿಸುವುದಿಲ್ಲ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯಾಧ್ಯಂತ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ 3.23 ಲಕ್ಷ ಸಿವಿಲ್ ಹಾಗೂ 34,173 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ. ಅಲ್ಲದೇ ರಾಜ್ಯದಲ್ಲಿ ಒಟ್ಟು 220 ನ್ಯಾಯಾಲಯ ಸಂಕೀರ್ಣಗಳಿದ್ದು, ಅದರಲ್ಲಿ ಕೇವಲ 14 ಮಾತ್ರ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಸೌಲಭ್ಯ ಒದಗಿಸಲು ಸರಕಾರ ಆದ್ಯತೆ ನಿಡಲಿದ್ದು, ಕಟ್ಟಡ ನಿರ್ಮಾಣಕ್ಕಾಗಿ ನಿಗದಿಪಡಿಸಿರುವ ಅನುದಾನದಲ್ಲಿ ಶೇ. 50ರಷ್ಟನ್ನು ನ್ಯಾಯಾಂಗಕ್ಕೆ ಮೀಸಲಿರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನ್ಯಾ.ಎಸ್. ಅಬ್ದುಲ್ ನಜೀರ್, ನ್ಯಾ.ಎ.ಎಸ್.ಬೋಪಣ್ಣ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಮಾಧುಸ್ವಾಮಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News