ಪಿಟಿಸಿಎಲ್ ತಿದ್ದುಪಡಿಗೆ ದಲಿತ ಸಂಘಟನೆಗಳ ಒಕ್ಕೂಟ ಪಟ್ಟು

Update: 2019-09-09 18:30 GMT

ಬೆಂಗಳೂರು, ಸೆ.9: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್) ಸಮಗ್ರ ತಿದ್ದುಪಡಿ ತರಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸೋಮವಾರ ನಗರದ ಪುರಭವನದ ಮುಂಭಾಗದ ಜಮಾಯಿಸಿದ ಒಕ್ಕೂಟದ ಸದಸ್ಯರು, ಭೂಮಿ ನಮ್ಮ ಹಕ್ಕು ಅದನ್ನು ರಕ್ಷಿಸಿಕೊಳ್ಳಲು ಪಿಟಿಸಿಎಲ್ ಕಾಯ್ದೆಯನ್ನು ಸಂರಕ್ಷಿಸಿ ಬಲಗೊಳಿಸಬೇಕಾಗಿದೆ. ಆದರೆ, ಕಂದಾಯ ಇಲಾಖೆ ರಾಜ್ಯದಲ್ಲಿ ಪಿಟಿಸಿಎಲ್ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದರಂದ ದಲಿತರ ಭೂಮಿ ಹಕ್ಕು ರಕ್ಷಣೆಗೆ ಗಂಡಾಂತರ ಒದಗಿದೆ ಎಂದು ಆರೋಪಿಸಿದರು.

ಸಾಮಾಜಿಕ ನ್ಯಾಯ ಹಾಗೂ ಪಿಟಿಸಿಎಲ್ ಕಾಯ್ದೆಯ ಚಾರಿತ್ರಿಕ ಮಹತ್ವ ಮತ್ತು ಅವಶ್ಯಕತೆಗಳನ್ನು ಅರಿತು ವ್ಯಾಖ್ಯಾನಿಸುವಲ್ಲಿ ಈ ದೇಶದ ಉನ್ನತ ನ್ಯಾಯಾಲಯಗಳು ಸಹ ವಿಫಲವಾಗುತ್ತಿರುವುದರಿಂದ ದಲಿತರ ಭೂಮಿ ರಕ್ಷಣೆಗೆ ಚ್ಯುತಿ ಬಂದಿದೆ. ಇವತ್ತು ತುರ್ತಾಗಿ ಪಿಟಿಸಿಎಲ್ ಕಾಯ್ದೆಯ 1978 ಮತ್ತು 1979 ರ ನಿಯಾಮಾವಳಿಗಳಿಗೆ ಸಮಗ್ರ ತಿದ್ದುಪಡಿ ತರಬೇಕಾಗಿದೆ. ಈ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಸಲಹೆಗಾರರ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ರಚನೆಗೊಂಡು ಕಾಯ್ದೆಗೆ ತಿದ್ದುಪಡಿ ಅಳವಡಿಸುವ ಪ್ರಕ್ರಿಯೆ ಆರಂಭವಾಗಬೇಕು. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಸಮಗ್ರ ತಿದ್ದುಪಡಿ ಕಾಯ್ದೆ ಅನುಮೋದನೆಗೊಳ್ಳಬೇಕು. ತುರ್ತಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆಯೊಂದನ್ನು ಕರೆದು ದಲಿತ ಸಂಘಟನೆಗಳ ಮುಖಂಡರಿಂದ ಪೂರಕ ಸಲಹೆಗಳನ್ನು ಪಡೆದು ನಿರ್ಣಯ ಅಂಗೀಕರಿಸಬೇಕು ಸಮತಾ ಸೈನಿಕ ದಳ ಅಧ್ಯಕ್ಷ ಎಂ.ವೆಂಕಟಸ್ವಾಮಿ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News