ಮೋದಿ ಸರಕಾರದ 100 ದಿನಗಳಲ್ಲಿ ಹೂಡಿಕೆದಾರರಿಗೆ 12.5 ಲಕ್ಷ ಕೋಟಿ ರೂ. ನಷ್ಟ

Update: 2019-09-10 09:14 GMT

ಹೊಸದಿಲ್ಲಿ, ಸೆ.10: ನರೇಂದ್ರ ಮೋದಿ ಸರಕಾರದ ಎರಡನೇ ಅವಧಿ ಮೇ 30ರಂದು ಆರಂಭಗೊಂಡ ನಂತರದ ಮೊದಲ 100 ದಿನಗಳಲ್ಲಿ 12.5 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆದಾರರು ಕಳೆದುಕೊಂಡಿದ್ದಾರೆ.

ಈ ಬಗ್ಗೆ ಅಭಿಷೇಕ್ ವಾಸುದೇವ್ ರ ವಿಶೇಷ ವರದಿಯನ್ನು ndtv.com ಪ್ರಕಟಿಸಿದೆ.

ಸೋಮವಾರ ಷೇರು ಮಾರುಕಟ್ಟೆ ಅವಧಿ ಅಂತ್ಯವಾಗುವಾಗ ಮಾರುಕಟ್ಟೆ ಬಂಡವಾಳೀಕರಣ ಅಥವಾ ಬಿಎಸ್‍ಇಯಲ್ಲಿ ಲಿಸ್ಟ್ ಆಗಿರುವ ಕಂಪೆನಿಗಳ ಮಾರುಕಟ್ಟೆ ಮೌಲ್ಯ ರೂ 1,41,15,316.39 ಕೋಟಿ ರೂ. ಆಗಿದ್ದು, ಮೋದಿ ಸರಕಾರ ಅಧಿಕಾರಕ್ಕೆ ಬರುವ ಒಂದು ದಿನ ಮೊದಲು ಈ ಮಾರುಕಟ್ಟೆ ಮೌಲ್ಯ ರೂ. 1,53,62,936.40 ಕೋಟಿಯಾಗಿತ್ತು.

ಸೆನ್ಸೆಕ್ಸ್  ಶೇ. 5.96ರಷ್ಟು ಅಥವಾ 2,357 ಅಂಕಗಳಷ್ಟು ಕುಸಿತ ಕಂಡಿದ್ದರೆ, ಎನ್‍ಎಸ್‍ಇ ನಿಫ್ಟಿ 50 ಸೂಚ್ಯಂಕ ಶೇ. 7.23ರಷ್ಟು ಅಥವಾ 858 ಅಂಕಗಳಷ್ಟು ಕುಸಿತವನ್ನು ಮೇ 30ರಿಂದ ಕಂಡಿದೆ.

ಮೋದಿ ಸರಕಾರದ ಎರಡನೇ ಅವಧಿ ಆರಂಭಗೊಂಡಂದಿನಿಂದ ವಿದೇಶಿ ಪೋರ್ಟ್ ಫೋಲಿಯೋ ಹೂಡಿಕೆದಾರರು ರೂ. 28,260.50 ಕೋಟಿಯಷ್ಟು ಷೇರುಗಳನ್ನು ಮಾರಾಟ ಮಾಡಿದ್ದಾರೆಂದು ಎನ್‍ಎಸ್‍ಡಿಎಲ್ ಅಂಕಿ ಅಂಶಗಳು ತಿಳಿಸಿವೆ.

ಮೆಟಲ್ ಸೂಚ್ಯಂಕವು ಅಮೆರಿಕಾ ಹಾಗೂ ಚೀನಾದ ವ್ಯಾಪಾರ ಸಮರದಿಂದಾಗಿ  ಶೇ 30ರಷ್ಟು ಕಡಿಮೆಯಾಗಿದ್ದರೆ ನಿಫ್ಟಿ ಆಟೋ ಸೂಚ್ಯಂಕ ಶೇ 13.48ರಷ್ಟು ಇಳಿಕೆ ಕಂಡಿದ್ದು ಆಟೊಮೊಬೈಲ್ ಕ್ಷೇತ್ರ  ಕಳೆದೆರಡು ದಶಕದಲ್ಲಿಯೇ  ಬಿಕ್ಕಟ್ಟು ಎದುರಿಸುತ್ತಿದೆ.

ನಿಫ್ಟಿ ಬ್ಯಾಂಕ್, ಖಾಸಗಿ ಬ್ಯಾಂಕ್, ಮಾಧ್ಯಮ ಹಾಗೂ ರಿಯಲ್ ಎಸ್ಟೇಟ್ ಕೇತ್ರದ ಸೂಚ್ಯಂಕಗಳೂ ಶೇ 10ರಿಂದ 14ರಷ್ಟು ಕುಸಿತ ಕಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News