ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಟಿಡಿಪಿ ನಾಯಕರಿಗೆ ಗೃಹ ಬಂಧನ

Update: 2019-09-11 04:31 GMT

ವಿಜಯವಾಡ, ಸೆ.11: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ಆಯೋಜಿಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಡೆಯಲು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಅವರ ಮಗ ನಾರಾ ಲೋಕೇಶ್ ಸೇರಿದಂತೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಹಲವು ಮಂದಿ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ.

ವಿಜಯವಾಡ ಬಳಿಯ ಉಂಡವಳ್ಳಿಯಲ್ಲಿರುವ  ಪೊಲೀಸರು ಚಂದ್ರಬಾಬು ನಾಯ್ಡು ಅವರನ್ನು ಅವರ ಮನೆಯಲ್ಲಿ ವಶಕ್ಕೆ ಪಡೆದಿದ್ದಾರೆ . ಬಂಧನದ ವಿರುದ್ಧ ಪ್ರತಿಭಟಿಸಲು ನಾಯ್ಡು ನಿವಾಸದ ಹೊರಗೆ ಜಮಾಯಿಸಿದ ಹಲವಾರು ಟಿಡಿಪಿ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ.  ಈ ಘಟನೆಯ ಬಳಿಕ ಆಂಧ್ರಪ್ರದೇಶದಲ್ಲಿ ಉದ್ವಿಗ್ನತೆ  ಉಂಟಾಗಿದೆ. 

ಹಿಂಸಾಚಾರ ಮತ್ತು ಬೆದರಿಕೆಗಳ ವಿರುದ್ಧ ಟಿಡಿಪಿ ಪ್ರತಿಭಟನೆ ನಡೆಸಲು ಯೋಜಿಸಿತ್ತು. ಕಳೆದ ವಾರ 100 ದಿನಗಳ ಅಧಿಕಾರವನ್ನು ಪೂರ್ಣಗೊಳಿಸಿದ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರಕಾರದ ಅಧಿಕಾರದ ಅವಧಿಯಲ್ಲಿ ಎಂಟು ಟಿಡಿಪಿ ಕಾರ್ಯಕರ್ತರ ಹತ್ಯೆಯಾಗಿದೆ ಮತ್ತು ಹಲವು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ನಾಯ್ಡು ಅವರ ಪಕ್ಷ ಆರೋಪಿಸಿದೆ.

"ಇದು ಪ್ರಜಾಪ್ರಭುತ್ವದ ಕರಾಳ ದಿನಗಳಾಗಿವೆ " ಎಂದು ನಾಯ್ಡು ಹೇಳಿದ್ದಾರೆ.ಟಿಡಿಪಿ ನಾಯಕರಾದ ದೇವಿನೇನಿ ಅವಿನಾಶ್, ಕೆಸಿನೇನಿ ನಾನಿ ಮತ್ತು ಭೂಮಾ ಅಖಿಲಪ್ರಿಯ ಸೇರಿದಂತೆ ಹಲವರಿಗೆ ಗೃಹಬಂಧನ ವಿಧಿಸಲಾಗಿದೆ.

ಇದೇ ವೇಳೆ ಆಡಳಿತ ಪಕ್ಷವು ಇಂದು ಪ್ರತಿಯಾಗಿ ಮೆರವಣಿಗೆಯನ್ನು ಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News