ರಾಜಧಾನಿಯಲ್ಲಿ ನಿಷೇಧ ಘೋಷಿಸಿದ್ದರೂ ಇನ್ನೂ ನಿಂತಿಲ್ಲ ಪ್ಲಾಸ್ಟಿಕ್ ಬಳಕೆ !

Update: 2019-09-11 18:16 GMT

ಬೆಂಗಳೂರು, ಸೆ.11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೆ.1ರಿಂದ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಮೇಯರ್, ಆಯುಕ್ತರು, ಅಧಿಕಾರಿಗಳು ಘೋಷಿಸಿದ್ದರೂ, ಪ್ಲಾಸ್ಟಿಕ್ ಚೀಲಗಳ ಬಳಕೆ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ.

ಎನ್‌ಜಿಟಿ ಆದೇಶದ ಮೇರೆಗೆ ರಚನೆಯಾದ ಘನತ್ಯಾಜ್ಯ ನಿರ್ವಹಣೆ ಸಮಿತಿ ಕೂಡ ಪ್ಲಾಸ್ಟಿಕ್ ನಿಷೇಧವನ್ನು ಸಮರ್ಪಕವಾಗಿ ಜಾರಿ ಮಾಡುವ ಕುರಿತು ಬಿಬಿಎಂಪಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೆ.1ರಿಂದ ಪ್ಲಾಸ್ಟಿಕ್ ನಿಷೇಧವನ್ನು ನಗರದಲ್ಲಿ ಕಡ್ಡಾಯ ಮಾಡಲಾಗಿತ್ತು. ಆದರೆ ರಾಜಧಾನಿಯ ಹೃದಯಭಾಗದಲ್ಲಿರುವ ಕೆ.ಆರ್.ಮಾರುಕಟ್ಟೆಯಲ್ಲೇ ಪ್ಲಾಸ್ಟಿಕ್ ಚೀಲಗಳ ಸಂಪೂರ್ಣ ನಿಷೇಧ ಸಾಧ್ಯವಾಗಿಲ್ಲ. ನಗರದ ವಿವಿಧ ಭಾಗಗಳ ಹೊಟೇಲ್, ತರಕಾರಿ, ಹಣ್ಣು ಅಂಗಡಿಗಳಲ್ಲಿ ಕಾಗದದ ಪೊಟ್ಟಣ, ಬಟ್ಟೆಯ ಚೀಲ ಬಳಸಲಾಗುತ್ತಿದೆ. ಸಣ್ಣ ಕ್ಯಾಂಟೀನ್, ಬೀದಿ ಬದಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಅತಿಯಾಗಿ ಕಂಡು ಬರುತ್ತಿದೆ. ಅದರಲ್ಲೂ ಕೆ.ಆರ್. ಮಾರುಕಟ್ಟೆಯು ಪ್ಲಾಸ್ಟಿಕ್ ಚೀಲಗಳ ಕೇಂದ್ರವೇ ಆಗಿ ಹೋಗಿದೆ.

ಕೆ.ಆರ್.ಮಾರುಕಟ್ಟೆಯಲ್ಲಿ ಪ್ರತಿ ದಿನ ಟನ್‌ಗಟ್ಟಲೆ ಕಸ ಉತ್ಪತ್ತಿಯಾಗುತ್ತದೆ. ಬಾಳೆಎಲೆ, ಹೂವು, ಸೊಪ್ಪು ಮೊದಲಾದ ಹಸಿ ಕಸಗಳನ್ನು ವಿಲೇವಾರಿ ಮಾಡಬಹುದು. ಆದರೆ, ರಾಶಿ ಬೀಳುವ ಪ್ಲಾಸ್ಟಿಕ್ ವಿಲೇವಾರಿ ಮಾಡುವುದು ಕಷ್ಟ ಸಾಧ್ಯವಾಗಿದೆ. ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಪರಿಸರ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಇಂತಹ ಸ್ಥಳದಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ.

ಕೆ.ಆರ್.ಮಾರುಕಟ್ಟೆಯಲ್ಲಿ ಹೂವಿನ ಮಾರುಕಟ್ಟೆ ಹಾಗೂ ಮೇಲ್ಸೇತುವೆ ಬದಿಯ ತರಕಾರಿ, ಹಣ್ಣು, ಬಟ್ಟೆ, ಮಳಿಗೆಗಳಲ್ಲಿ ಏನೇ ಕೊಂಡರೂ ಪ್ಲಾಸ್ಟಿಕ್ ಚೀಲ ಉಚಿತವಾಗಿ ದೊರೆಯುತ್ತದೆ. ಪ್ರತಿ ಬೀದಿ ವ್ಯಾಪಾರಿಯ ಬಳಿ ಈ ಬಗೆಯ ಚೀಲವಿದೆ. ಅಲ್ಲದೆ. ಬಿಟ್ಟು -ಪಿಕ್ ಅಪ್ ಬ್ಯಾಗ್ ಹೆಸರಿನ ಪ್ಲಾಸ್ಟಿಕ್ ಚೀಲಗಳು ಎಲ್ಲ ಬೀದಿ ವ್ಯಾಪಾರಿಗಳ ಬಳಿಯಲ್ಲಿತ್ತು. ಇದರ ಮೇಲೆ 40 ಮೈಕ್ರಾನ್ಸ್ ಎಂದು ಬರೆಯಲಾಗಿತ್ತು.

ನ್ಯಾ.ಬಿ.ಸುಭಾಷ್ ಆಡಿ ಎಚ್ಚರಿಕೆ ಘನತ್ಯಾಜ್ಯ ನಿರ್ವಹಣೆ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾ.ಬಿ.ಸುಭಾಷ್ ಆಡಿ ಅವರು ಸೆ.1ರಿಂದ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿಷೇಧ ಕ್ರಮ ಜಾರಿಯಾಗಬೇಕು ಎಂದು ಬಿಬಿಎಂಪಿಗೆ ಸೂಚಿಸಿದ್ದರು. ನಂತರದ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಂಡರೆ ಬಿಬಿಎಂಪಿ ವಿರುದ್ಧ ಎನ್‌ಜಿಟಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಪ್ಲಾಸ್ಟಿಕ್ ಚೀಲ ಕೊಡದಿದ್ದರೆ ತರಕಾರಿ ಬೇಡವೆಂದು ಹೊರಟು ಹೋಗುತ್ತಾರೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಚೀಲ ನೀಡುವುದು ಅನಿವಾರ್ಯ.

-ಶರವಣ, ಕೆ.ಆರ್.ಮಾರುಕಟ್ಟೆಯ ತರಕಾರಿ ವ್ಯಾಪಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News