'ರಾಷ್ಟ್ರೀಯ ವಿಪತ್ತು' ಘೋಷಿಸಿದರೆ ಮಾತ್ರ ಹೆಚ್ಚಿನ ನೆರವು ಸಾಧ್ಯ: ಎಂ.ಬಿ.ಪಾಟೀಲ್

Update: 2019-09-12 14:13 GMT

ಬೆಂಗಳೂರು, ಸೆ.12: ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ 105 ವರ್ಷಗಳ ಬಳಿಕ ಸಂಭವಿಸಿದ ಘೋರ ಪ್ರವಾಹ ಹಾಗೂ ನೆರೆ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರಕಾರ ಘೋಷಿಸಿದರೆ ಮಾತ್ರ ಹೆಚ್ಚಿನ ನೆರವು ನಿರೀಕ್ಷಿಸಲು ಸಾಧ್ಯ ಎಂದು ಮಾಜಿ ಗೃಹ ಸಚಿವ ಡಾ.ಎಂ.ಬಿ.ಪಾಟೀಲ್ ಹೇಳಿದರು.

ಗುರುವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೆರೆ ಹಾಗೂ ಪ್ರವಾಹದಿಂದ ಸುಮಾರು 38 ಸಾವಿರ ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದು ಸರಕಾರ ಹೇಳಿದೆ. ಎನ್‌ಡಿಆರ್‌ಎಫ್ ನಿಯಮಾವಳಿಗಳ ಪ್ರಕಾರ ಹೋದರೆ ನಮಗೆ ಅತ್ಯಂತ ಕನಿಷ್ಠ ನೆರವು ಸಿಗಬಹುದಷ್ಟೇ ಎಂದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕೇಂದ್ರ ಸರಕಾದ ಬಳಿ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಅವಶ್ಯಕತೆಯಿಲ್ಲ ಎನ್ನುತ್ತಾರೆ. ಮತ್ತೊಬ್ಬ ಸಚಿವ ಮಾಧುಸ್ವಾಮಿ, ನೆರವು ಕೇಳಿದರೆ ಕಾಲು ಭಾಗವು ಸಿಗುವುದಿಲ್ಲ ಎನ್ನುತ್ತಾರೆ. ಮತ್ತೊಮ್ಮೆ ಹಿರಿಯ ಸಚಿವ ಈಶ್ವರಪ್ಪ, 10 ಸಾವಿರ ರೂ.ತಾತ್ಕಾಲಿಕ ಪರಿಹಾರ ಕೊಟ್ಟಿರುವುದೇ ಹೆಚ್ಚು ಎನ್ನುತ್ತಾರೆ. ಈ ಸರಕಾರಕ್ಕೆ ನೆರೆ ಹಾಗೂ ಪ್ರವಾಹ ಸಂತ್ರಸ್ತರ ಬದುಕು ಕಟ್ಟಿಕೊಡಬೇಕೆಂಬ ಬದ್ಧತೆ, ಮನಸ್ಸಿಲ್ಲ ಎಂದು ಅವರು ಟೀಕಿಸಿದರು. ಸಂತ್ರಸ್ತರಿಗೆ ತಾತ್ಕಾಲಿಕವಾಗಿ ನೀಡುವ 10 ಸಾವಿರ ರೂ.ಗಳ ಪರಿಹಾರವನ್ನು 1.10 ಲಕ್ಷ ಕುಟುಂಬಗಳಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಕಂದಾಯ ಸಚಿವ ಆರ್.ಅಶೋಕ್, 2 ಲಕ್ಷ ಕುಟುಂಬಗಳಿಗೆ ನೀಡಿದ್ದೇವೆ ಎನ್ನುತ್ತಾರೆ. ಯಾರನ್ನು ನಂಬುವುದು. ಈ ರೀತಿಯ ಸುಳ್ಳು ಮಾಹಿತಿಗಳನ್ನು ನೀಡಿ ಸರಕಾರ ಪಲಾಯನ ಮಾಡುವುದು ಸರಿಯಲ್ಲ ಎಂದು ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು.

ಮನೆಗಳನ್ನು ಕಳೆದುಕೊಂಡಿರುವವರಿಗೆ ಅದೇ ಸ್ಥಳದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುವುದಾದರೆ 25 ಸಾವಿರ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬಾಡಿಗೆ ಮನೆ ಪಡೆಯಲು 5 ಸಾವಿರ ರೂ. ಹಾಗೂ ತಾತ್ಕಾಲಿಕ ಶೆಡ್‌ಗಳ ನಿರ್ಮಾಣಕ್ಕೆ 50 ಸಾವಿರ ರೂ.ಗಳನ್ನು ನೀಡುವುದಾಗಿ ಅಶೋಕ್ ತಿಳಿಸಿದ್ದಾರೆ. ಆದರೆ, ಎಲ್ಲಿಯೂ ಈ ರೀತಿಯ ಪರಿಹಾರ ಒದಗಿಸಿಲ್ಲ ಎಂದು ಅವರು ಆರೋಪಿಸಿದರು.

ಜನ ಬಯಸಿದರೆ ಗ್ರಾಮಗಳನ್ನು ಸ್ಥಳಾಂತರ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ನೆರೆ ನೀರು ನಿಂತಿರುವ ಪ್ರದೇಶಗಳನ್ನು ಮುಳುಗಡೆ ಪ್ರದೇಶವೆಂದು ಪರಿಗಣಿಸಿ, ಆದ್ಯತೆಯ ಮೇರೆಗೆ ಗ್ರಾಮಗಳನ್ನು ಸ್ಥಳಾಂತರಿಸಬೇಕು. ತಾತ್ಕಾಲಿಕ ಪರಿಹಾರದ ಮೊತ್ತವನ್ನು 10 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಬೇಕು ಎಂದು ಎಂ.ಬಿ.ಪಾಟೀಲ್ ಮನವಿ ಮಾಡಿದರು.

ಮನೆ ಹಾಗೂ ನಿವೇಶನ ಇಲ್ಲದ ಸಂತ್ರಸ್ತರಿಗೆ 18x16 ಅಥವಾ 15x20 ಅಡಿ ವಿಸ್ತೀರ್ಣದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಕುಡಿಯುವ ನೀರು ಕಲ್ಪಿಸಿ, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಸ್ನಾನ ಗೃಹ ಮತ್ತು ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಸಂಪೂರ್ಣ, ಭಾಗಶಃ ಬಿದ್ದುಹೋಗಿರುವ ಮನೆಗಳಲ್ಲದೇ ನೀರಿನಲ್ಲಿ ನೆಂದಿರುವ ಮನೆಗಳು ಕಾಲಕ್ರಮೇಣ ಕುಸಿಯುತ್ತವೆ. ಇಂತಹ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಜೀವ ಭಯದಿಂದ ಅಭದ್ರತೆಯಿಂದ ಅನಿವಾರ್ಯವಾಗಿ ವಾಸಿಸುತ್ತಿದ್ದಾರೆ. ಮುಂದಿನ ಅನಾಹುತ ತಪ್ಪಿಸಲು ಇವರಿಗೂ ಹೊಸ ಮನೆಗಳನ್ನು ಕಟ್ಟಿಸಿಕೊಡಬೇಕು ಎಂದು ಎಂ.ಬಿ.ಪಾಟೀಲ್ ಆಗ್ರಹಿಸಿದರು.

ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ನೆರೆ ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಹಾನಿಯ ಬಗ್ಗೆ ಸಮರ್ಪಕವಾಗಿ ಸಮೀಕ್ಷೆ ನಡೆಯುತ್ತಿಲ್ಲ. ಜನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಅವರ ಮೃತದೇಹಗಳು ಸಿಗುವವರೆಗೆ ಪರಿಹಾರ ನೀಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಇಂತಹ ಪ್ರಕರಣಗಳಲ್ಲಿ ಕೂಡಲೇ ಆ ಕುಟುಂಬಗಳಿಗೆ ಪರಿಹಾರ ಒದಗಿಸುವ ಕೆಲಸವಾಗಬೇಕು ಎಂದರು.

ಶಾಸಕ ಮಹಾಂತೇಶ್ ಕೌಜಲಗಿ ಮಾತನಾಡಿ, ಬೈಲಹೊಂಗಲ ತಾಲೂಕಿನಲ್ಲಿ 5770 ಮಂದಿ ಸಂತ್ರಸ್ತರ ಪೈಕಿ 420 ಮಂದಿ, ಕಿತ್ತೂರು ತಾಲೂಕಿನಲ್ಲಿ 1122 ಮಂದಿ ಪೈಕಿ 149, ಸವದತ್ತಿ ತಾಲೂಕಿನಲ್ಲಿ 4363 ಮಂದಿ ಪೈಕಿ 1544ಗೆ ಮಾತ್ರ ತಲಾ 10 ಸಾವಿರ ರೂ.ಗಳ ಪರಿಹಾರ ಸಿಕ್ಕಿದೆ. ಶೇ.20 ರಿಂದ 25ರಷ್ಟು ಮಂದಿಗೆ ಮಾತ್ರ ಇದರಿಂದ ಪ್ರಯೋಜನವಾಗಿದೆ ಎಂದರು.

ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಬೆಳೆ ಹಾನಿ ಬಗ್ಗೆ ಸೂಕ್ತ ಸರ್ವೆ ಮಾಡುತ್ತಿಲ್ಲ. ಇದರಿಂದಾಗಿ, ರೈತರು ಹೊಸ ಬೆಳೆಯಲು ಸಾಧ್ಯವಾಗುತ್ತಿಲ್ಲ. ಪ್ರತಿ ಎಕರೆಗೆ ಸರಕಾರ ನೀಡುತ್ತಿರುವ 5 ಸಾವಿರ ರೂ.ಗಳ ಪರಿಹಾರದಲ್ಲಿ ಅಲ್ಲಿನ ಕಸವನ್ನು ತೆರವುಗೊಳಿಸಲು ಸಾಧ್ಯವಾಗುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಅಪ್ಪಾಜಿ ನಾಡಗೌಡ, ವಿಧಾನಪರಿಷತ್ ಸದಸ್ಯ ವಿವೇಕ್‌ರಾವ್ ಪಾಟೀಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಘೋರ್ಪಡೆ ಉಪಸ್ಥಿತರಿದ್ದರು.

ಕೇಂದ್ರ-ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾಟ

ನೆರೆ ಹಾಗೂ ಪ್ರವಾಹ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸದೆ ಪಲಾಯನವಾದ ಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಬೆಳಗಾವಿ ಭಾಗದಲ್ಲಿ ಸುಮಾರು ಒಂದು ಲಕ್ಷ ಜನ ಸಂತ್ರಸ್ತರನ್ನು ಸೇರಿಸಿ ಉಗ್ರ ಹೋರಾಟ ರೂಪಿಸುವ ಮೂಲಕ, ಈ ಸರಕಾರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಲು ನಿರ್ಧರಿಸಲಾಗಿದೆ.

-ಡಾ.ಎಂ.ಬಿ.ಪಾಟೀಲ್, ಮಾಜಿ ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News