ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಗುಚಿದ ಬೋಟ್: 13 ಮಂದಿ ಮೃತ್ಯು

Update: 2019-09-13 04:45 GMT

ಭೋಪಾಲ್, ಸೆ.13: ಇಲ್ಲಿನ ಛೋಟಿ ಝೀಲ್ ಸರೋವರದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ದೊಡ್ಡ ಗಾತ್ರದ ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಬೋಟ್ ಮಗುಚಿ ಬಿದ್ದ ಪರಿಣಾಮ ಕನಿಷ್ಠ 13 ಜನರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಆರು ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗಿನ ಜಾವ 4:40ರ ಸುಮಾರಿಗೆ ಈ ಘಟನೆ ನಡೆದಿದೆ. ಮೃತಪಟ್ಟವರು ಮಧ್ಯಪ್ರದೇಶದ ಪಿಪ್ಲಾನಿ ಪ್ರದೇಶದ ನಿವಾಸಿಗಳೆಂದು ಗುರುತಿಸಲಾಗಿದೆ. ಬೃಹತ್ ಗಣೇಶ್ ಮೂರ್ತಿಯನ್ನು ಎರಡು ಬೋಟ್‌ಗಳ ಮುಖಾಂತರ ನೀರಿಗೆ ವಿಸರ್ಜಿಸಿದ ಬಳಿಕ ಈ ಅವಘಡ ಸಂಭವಿಸಿದೆ. ಒಟ್ಟು 19 ಮಂದಿ ಎರಡು ಪ್ರತ್ಯೇಕ ಬೋಟ್‌ಗಳಲ್ಲಿ ಗಣಪತಿ ಮೂರ್ತಿಯ ವಿಸರ್ಜನೆಗಾಗಿ ಸರೋವರಕ್ಕೆ ತೆರಳಿದ್ದರು.

ಗಣೇಶ್ ಮೂರ್ತಿ ವಿಸರ್ಜನೆಯ ಬೆನ್ನಿಗೇ ಎರಡೂ ಬೋಟ್‌ಗಳು ಮಗುಚಿ ಬಿದ್ದಿದ್ದವು. ಮುಳುಗು ತಜ್ಞರು 11 ಮಂದಿಯ ಮೃತದೇಹವನ್ನು ಹೊರ ತೆಗೆದಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರಕಾರ ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಘಟನೆ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕಮಲನಾಥ್ ಹಾಗೂ ಕಾನೂನು ಸಚಿವ ಪಿ.ಸಿ.ಶರ್ಮಾ ಘಟನೆಯ ಹಿಂದಿನ ಕಾರಣವನ್ನು ಆದಷ್ಟು ಬೇಗನೆ ಪತ್ತೆ ಹಚ್ಚಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News