ಜಾಧವ್‌ಗೆ ಇನ್ನೊಂದು ಕೌನ್ಸುಲರ್ ಸಂಪರ್ಕ ಏರ್ಪಡಿಸುವುದಿಲ್ಲ: ಪಾಕ್

Update: 2019-09-13 16:20 GMT

 ಇಸ್ಲಾಮಾಬಾದ್, ಸೆ. 13: ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಲ್ಲಿ ಮರಣ ದಂಡನೆ ಶಿಕ್ಷೆಗೆ ಒಳಗಾಗಿರುವ ಕುಲಭೂಷಣ್ ಜಾಧವ್‌ಗೆ ಎರಡನೇ ಬಾರಿ ಭಾರತೀಯ ಕೌನ್ಸುಲರ್ ಸಂಪರ್ಕ ಒದಗಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

ಅದೇ ವೇಳೆ, ಕರ್ತಾರ್‌ಪುರ ಕಾರಿಡಾರನ್ನು ಬಳಸುವ ಭಾರತೀಯ ಯಾತ್ರಿಗಳು 20 ಡಾಲರ್ (ಸುಮಾರು 1,400 ರೂಪಾಯಿ) ಸೇವಾ ಶುಲ್ಕವನ್ನು ನೀಡಬೇಕು ಎಂದು ಅದು ತಿಳಿಸಿದೆ.

 ಪಾಕಿಸ್ತಾನದ ವಿದೇಶ ಕಚೇರಿಯ ವಕ್ತಾರ ಮುಹಮ್ಮದ್ ಫೈಝಲ್‌ರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತವು, ಜಾಧವ್‌ಗೆ ಕೌನ್ಸುಲರ್ ಸಂಪರ್ಕವನ್ನು ನೀಡಬೇಕೆನ್ನುವ ಅಂತರ್‌ರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಪಾಕಿಸ್ತಾನ ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದೆ.

ನವೆಂಬರ್‌ನಲ್ಲಿ ನಡೆಯಲಿರುವ ಗುರು ನಾನಕರ 550ನೇ ಜನ್ಮ ದಿನದ ಸಂದರ್ಭದಲ್ಲಿ ಕರ್ತಾರ್‌ಪುರ ಕಾರಿಡಾರ್ ಸಿದ್ಧಗೊಳ್ಳುವ ರೀತಿಯಲ್ಲಿ, ಯೋಜನೆಯಲ್ಲಿ ಕೊಂಚ ಮಾರ್ಪಾಡು ಮಾಡಿಕೊಳ್ಳುವಂತೆಯೂ ಭಾರತ ಪಾಕಿಸ್ತಾನವನ್ನು ಕೋರಿದೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೈಝಲ್, ಜಾಧವ್‌ಗೆ ಮತ್ತೊಮ್ಮೆ ಕೌನ್ಸುಲರ್ ಸಂಪರ್ಕ ಒದಗಿಸುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘‘ಇನ್ನೊಂದು ಭೇಟಿ ನಿಗದಿಯಾಗಿಲ್ಲ’’ ಎಂದರು. ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News