ಬೊಕ್ಕಸದಿಂದ ಸಚಿವರ ತೆರಿಗೆ ಪಾವತಿ: ಕಾಯ್ದೆ ರದ್ದತಿಗೆ ಮುಂದಾದ ಸರ್ಕಾರ

Update: 2019-09-14 03:54 GMT

ಲಕ್ನೋ: ಉತ್ತರ ಪ್ರದೇಶದಲ್ಲಿ ಸಚಿವರ ವೇತನದ ಆದಾಯ ತೆರಿಗೆಯನ್ನು ನಾಲ್ಕು ದಶಕಗಳಿಂದ ರಾಜ್ಯ ಸರ್ಕಾರದ ಖಜಾನೆಯಿಂದಲೇ ಭರಿಸುತ್ತಿರುವ ಬಗ್ಗೆ ನಿನ್ನೆಯಷ್ಟೇ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಆದಿತ್ಯನಾಥ್ ಸರ್ಕಾರ, ಉತ್ತರ ಪ್ರದೇಶ ಸಚಿವರ ವೇತನ, ಭತ್ಯೆ ಮತ್ತು ಇತರ ಸೌಲಭ್ಯಗಳ ಕಾಯ್ದೆ-1981ರ ವಿವಾದಾತ್ಮಕ ವಿಧಿಯನ್ನು ರದ್ದು ಮಾಡುವುದಾಗಿ ಪ್ರಕಟಿಸಿದೆ.

"ಬಡವರು ಹಾಗೂ ಕನಿಷ್ಠ ಆದಾಯ ಹೊಂದಿರುವ ಕಾರಣದಿಂದ ಆದಾಯ ತೆರಿಗೆ ಪಾವತಿಸುವ ಸಾಮರ್ಥ್ಯ ಇಲ್ಲದವರು" ಎಂಬ ಕಾರಣಕ್ಕೆ ಸರ್ಕಾರದ ಖಜಾನೆಯಿಂದ ಸಚಿವರ ವೇತನದ ಮೇಲಿನ ತೆರಿಗೆ ಪಾವತಿಸುತ್ತಿದ್ದು, ಇದು ಸರ್ಕಾರಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿತ್ತು. ವಿ.ಪಿ.ಸಿಂಗ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಈ ಕಾಯ್ದೆ ಜಾರಿಗೆ ತರಲಾಗಿತ್ತು.

ವರದಿಗೆ ಸ್ಪಂದಿಸಿದ ಸಿಎಂ ಆದಿತ್ಯನಾಥ್, ಹಣಕಾಸು, ಸಂಸದೀಯ ವ್ಯವಹಾರ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುರೇಶ್ ಖನ್ನಾ ಅವರಿಗೆ ದೂರವಾಣಿ ಮೂಲಕ ಮಾತನಾಡಿ, ಈ ಸಂಬಂಧ ಕರಡು ತಯಾರಿಸಿ ಸಂಪುಟ ಸಭೆಯ ಮುಂದೆ ಸಲ್ಲಿಸುವಂತೆ ಸೂಚಿಸಿದ್ದಾರೆ.

"ಈ ಅರಾಜಕ ಕಾನೂನು ಕಿತ್ತುಹಾಕುವಂತೆ ಸಿಎಂ ಸೂಚಿಸಿದ್ದಾರೆ. ವಿವರವಾದ ಚರ್ಚೆ ಬಳಿಕ, ಸಂಪುಟದ ಅನುಮೋದನೆ ಪಡೆಯುವ ಸಲುವಾಗಿ ತಕ್ಷಣ ಕರಡು ಸಿದ್ಧಪಡಿಸುವಂತೆ ಸಲಹೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಾಪಗಳನ್ನು ನಾವು ಮುಂದುವರಿಸುವುದಿಲ್ಲ" ಎಂದು ಸುರೇಶ್ ಖನ್ನಾ ತಿಳಿಸಿದ್ದಾರೆ.

ಬಡವರು ಎಂದು ಹೇಳಿಕೊಂಡು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿರುವ ಸಚಿವರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News