ನೂತನ ಮೋಟಾರು ವಾಹನ ಕಾಯ್ದೆ: ದಂಡದಲ್ಲೂ ದಾಖಲೆ ನಿರ್ಮಿಸಿದ ಬೆಂಗಳೂರು

Update: 2019-09-14 13:19 GMT

ಬೆಂಗಳೂರು, ಸೆ.14: ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಆಗಿ ದಂಡದ ಹೊಸ ದರಪಟ್ಟಿ ಜಾರಿಗೊಂಡ ಬಳಿಕ ಪೊಲೀಸರಿಂದ ದಂಡ ಶುಲ್ಕ ಸಂಗ್ರಹದಲ್ಲೂ ಭಾರಿ ಏರಿಕೆ ಆಗಿದ್ದು, ಕಳೆದ ಹತ್ತೇ ದಿನದಲ್ಲಿ ರಾಜಧಾನಿ ಬೆಂಗಳೂರು ಒಂದರಲ್ಲಿಯೇ ದಂಡದ ಮೊತ್ತ 2 ಕೋಟಿ ರೂ. ದಾಟಿದೆ.

ಹೊಸ ನಿಯಮಗಳು ಅನ್ವಯವಾದ ಬಳಿಕ ಸೆ.4ರಿಂದ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, ವಿವಿಧ ನಿಯಮ ಉಲ್ಲಂಘನೆ ಸಂಬಂಧ 28,110 ಪ್ರಕರಣಗಳಿಗೆ 2 ಕೋಟಿ ರೂಪಾಯಿಗೂ ಅಧಿಕ ಮೊತ್ತ ವಸೂಲಿ ಮಾಡಿದ್ದಾರೆ.

ಸೆ.4 ರಾತ್ರಿಯಿಂದ ಸೆ.9ರವರೆಗೂ 6,813 ಪ್ರಕರಣಗಳನ್ನು ದಾಖಲಿಸಿ ಸಂಚಾರ ಪೊಲೀಸರು, 72.49 ಲಕ್ಷ ರೂ. ವಸೂಲಿ ಮಾಡಿದ್ದರು. ಅದೇ ರೀತಿ, ಸೆ.10ರಿಂದ ಮರು ದಿನ ಬೆಳಗ್ಗೆ 10 ಗಂಟೆವರೆಗೂ ಕಾರ್ಯಾಚರಣೆ ನಡೆಸಿ, 10,974 ಪ್ರಕರಣಗಳನ್ನು ಪತ್ತೆಹಚ್ಚಿ 38.12 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಸೆ.13ರಿಂದ ಶನಿವಾರ ಬೆಳಗ್ಗೆವರೆಗಿನ ಕಾರ್ಯಾಚರಣೆಯಲ್ಲಿ 10,923 ಪ್ರಕರಣಗಳು ಬೆಳಕಿಗೆ ಬಂದಿದ್ದು, 42.53 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ ಆರೋಪದಡಿ ಇದುವರೆಗೂ 220 ಮಂದಿ ವಿರುದ್ಧ ದೂರು ದಾಖಲಾಗಿದ್ದು, ಹೆಲ್ಮೆಟ್ ಧರಿಸಿದ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂದಿವೆ ಎಂದು ಪೊಲೀಸರು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News