ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ: ಎಚ್.ಎಸ್.ದೊರೆಸ್ವಾಮಿ

Update: 2019-09-14 13:15 GMT

ಬೆಂಗಳೂರು, ಸೆ.14: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ತಾಳಿ ದೇಶದ ರಾಜಕೀಯವನ್ನು ಹುಲ್ಲುಗಾವಲನ್ನಾಗಿ ಮಾಡಿಕೊಂಡು ಮನ ಬಂದಂತೆ ಮೇಯುತ್ತಿದ್ದಾರೆ. ಇಂತಹ ಭೀಕರ ಪರಿಸ್ಥಿತಿ ವಿರುದ್ಧ ಸ್ಥಾನಮಾನ ಮರೆತು ಎಲ್ಲರೂ ಹೋರಾಡಬೇಕು. ಈ ಬಗ್ಗೆ ಸಮಾಲೋಚನೆ, ಚರ್ಚೆ ನಡೆಯಬೇಕು ಸ್ವಾತಂತ್ರ ಹೋರಾಟ ಡಾ.ಎಚ್.ಎಸ್.ದೊರೆಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಆಯೋಜಿಸಿದ್ದ ದಿ.ಎ.ಕೆ.ಸುಬ್ಬಯ್ಯ ‘ಶ್ರದ್ಧಾಂಜಲಿ ಸಲ್ಲಿಕೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳನ್ನು ನಾಶಮಾಡುವ ಮೂಲಕ ಬಿಜೆಪಿ ಅತಿಕ್ರಮಣ ಧೋರಣೆ ತಾಳಿದ್ದು, ಇದರಿಂದ ದೇಶದಲ್ಲಿ ಪ್ರತಿಸ್ಪರ್ಧಿ ನಾಯಕರೇ ಇಲ್ಲದಂತಾಗಿದೆ. ದೇಶದಲ್ಲಿನ ಪ್ರಮುಖ ರಾಜಕೀಯ ಪಕ್ಷಗಳು ಬೌದ್ಧಿಕವಾಗಿ ದಿವಾಳಿಯಾಗುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಹೀಗಾಗಿ ಬಿಜೆಪಿಯ ನಿಲುವಿಗೆ ಮಣಿಯದೇ ಅವರ ವಿರುದ್ಧ ಎಲ್ಲರೂ ಸಂಘಟಿತರಾಗಿ ಚುನಾವಣೆಗೂ ಮುನ್ನವೇ ಹೋರಾಡಬೇಕಿದೆ. ಪ್ರಜಾಪ್ರಭುತ್ವಕ್ಕೆ ಪೂರಕ ಫಲಿತಾಂಶ ಪಡೆಯಬೇಕಿದೆ ಎಂದರು. 

ಆರೆಸ್ಸೆಸ್, ಬಿಜೆಪಿಯನ್ನು ಪ್ರತಿಪಾದಿಸುವ ಹಾಗೂ ಸಂಘಟಿಸುವಲ್ಲಿ ಸುಬ್ಬಯ್ಯ ಅವರು ಹೆಚ್ಚು ಶ್ರಮಿಸಿದವರು. ಅವರ ಬೆಳವಣಿಗೆ ಸಹಿಸದ ಆ ಪಕ್ಷದ ನಾಯಕರು ಅವರನ್ನು ಹತ್ತಿಕ್ಕುವಲ್ಲಿ, ಅವಕಾಶ ವಂಚಿತರನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸುಬ್ಬಯ್ಯ ಅವರ ರಾಜಕೀಯ ಅಂತ್ಯ ಸುಖಕರವಾಗಿರಲಿಲ್ಲ ಎಂದು ಬೇಷರ ವ್ಯಕ್ತಪಡಿಸಿದರು.

ಟಿಯುಎಫ್‌ಎಫ್ ಉಪಾಧ್ಯಕ್ಷ ಪ್ರೊ.ಎನ್.ವಿ.ನರಸಿಂಹಯ್ಯ ಮಾತನಾಡಿ, ಎ.ಕೆ.ಸುಬ್ಬಯ್ಯ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ವಿಚಾರಧಾರೆ, ದಿಟ್ಟತನ, ನಡೆದು ಬಂದ ದಾರಿಗಳು ನಮಗೆ ಸದಾ ಸ್ಫೂರ್ತಿ. ಸಮಾಜದ ಒಳಿತಿಗೆ ಸದಾ ಶ್ರಮಿಸುತ್ತಿದ್ದ ಅವರು, ನ್ಯಾಯಪರ ವಕೀಲರು, ಉತ್ತಮ ವಾಗ್ಮಿಗಳೂ ಆಗಿದ್ದರು. ಕ್ಷೌರಿಕರಿಗೆ ಮೀಸಲಾತಿ, ಬಡಜನರಿಗೆ ವಸತಿ ಮತ್ತು ಜಮೀನು ಕೊಡಿಸಬೇಕೆಂದು ಹೋರಾಡಿದವರಲ್ಲಿ ಅವರ ಪಾತ್ರ ಮಹತ್ವದ್ದು ಎಂದು ನೆನೆದರು.

ಕೆಎಸ್‌ಎಸ್‌ಡಿ ಅಧ್ಯಕ್ಷ ಚನ್ನಕೃಷ್ಣಪ್ಪ ಮಾತನಾಡಿ, ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ವಿಧಾನಸೌಧದ ಮುಂಭಾಗದ ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ಪದೇ ಪದೆ ಮುಂದೂಡಲ್ಪಡುತ್ತಿತ್ತು. ಆದರೆ ಪ್ರಕರಣ ಕೈಗೆತ್ತಿಕೊಂಡ ಸುಬ್ಬಯ್ಯ, ಎರಡೇ ದಿನದಲ್ಲಿ ಕೋರ್ಟ್ ಸ್ಥಳಾಂತರ ವಿಚಾರ ಕೈ ಬಿಡುವ ನಿರ್ಧಾರ ಪ್ರಕಟಿಸುವಂತೆ ವಾದ ಮಂಡಿಸಿ ನ್ಯಾಯ ಪರ ಜಯಶಾಲಿಯಾಗಿದ್ದರು ಎಂದು ಅವರ ಸಾಮಾಜಿಕ ಕಳಕಳಿಯನ್ನು ಸ್ಮರಿಸಿಕೊಂಡರು.

ಸಮಾರಂಭದಲ್ಲಿ ಮೈನಾರಿಟಿ ಸೇನೆ ಅಧ್ಯಕ್ಷ ಎ.ಜೆ.ಖಾನ್, ಜೆಡಿಎಸ್ ಮುಖಂಡ ಸೈಯದ್ ಶಫಿವುಲ್ಲಾ ಹಾಗೂ ಜನತಾರಂಗದ ಸಿ.ಕೆ.ರವಿಚಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News