ಚರಿತ್ರೆಯನ್ನು ಪುರಾಣವಾಗಿಸುವ ಪರಿಪಾಠ ಬದಲಾಗಬೇಕಿದೆ: ನಾಡೋಜ ಬರಗೂರು ರಾಮಚಂದ್ರಪ್ಪ

Update: 2019-09-14 14:20 GMT

ಬೆಂಗಳೂರು, ಸೆ.14: ಚರಿತ್ರೆಯನ್ನು ಪುರಾಣವಾಗಿಯೂ, ಪುರಾಣವನ್ನು ಚರಿತ್ರೆಯಾಗಿಯೂ ಕಟ್ಟಿಕೊಡುವಂತಹ ಕಾರ್ಯವನ್ನು ಯಾರೂ ಮಾಡಬಾರದು. ನಮ್ಮ ಚರಿತ್ರೆಗಳನ್ನು ವಾಸ್ತವಕ್ಕೆ ಹತ್ತಿರವಾಗಿ ದಾಖಲಿಸುವಂತಹ ಕೆಲಸವಾಗಬೇಕಿದೆ ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ. 

ಶನಿವಾರ ವರಶ್ರೀ ಪ್ರಕಾಶನ ಹಾಗೂ ಶ್ರೀವೆಂಕಟೇಶ್ವರ ವಿದ್ಯಾಪೀಠ ನಗರದ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಹಿರಿಯ ಸಾಹಿತಿ ಡಾ.ವರದಾ ಶ್ರೀನಿವಾಸರವರ ‘ಮಹಾಶರಣ ಮಡಿವಾಳ ಮಾಚಿದೇವ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಗತ್ತಿಗೆ ಕಾಯಕದ ಮಹತ್ವವನ್ನು ಸಾರಿದ 12 ಶತನಮಾನದ ಬಸವಣ್ಣನನ್ನು ಪವಾಡ ಪುರುಷನಾಗಿ, ದೇವತಾ ಪುರಷನಾಗಿ ಮಾಡಲಾಗಿದೆ. ಇದೇ ರೀತಿಯಲ್ಲಿಯೇ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯರಾಗಿಯೇ ಹುಟ್ಟಿ, ಸಮಾಜಕ್ಕೆ ಮಾನವೀಯ ಸಂದೇಶ ಸಾರಿದ ಎಲ್ಲ ಸುಧಾರಕರನ್ನು ದೇವರನ್ನಾಗಿಸುವ ಮನೋ ಪ್ರವೃತ್ತಿ ಬೆಳೆದಿರುವುದು ಒಳ್ಳೆಯದಲ್ಲ. ಇದು ಹೀಗೆಯೇ ಮುಂದುವರೆದರೆ ಡಾ.ರಾಜ್‌ಕುಮಾರ್‌ನ್ನು ದೇವರನ್ನಾಗಿಸಿಬಿಡುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇವತ್ತಿನ ಸಮಾಜದಲ್ಲಿ ನಿಜವಾದ ಸಂಶೋಧಕರು ಮನೆಯಲ್ಲಿದ್ದಾರೆ. ಆದರೆ, ರಾಜಕೀಯ ಪಕ್ಷಗಳಿಗೆ ಅಂಟಿಕೊಂಡಿರುವ ಸಂಶೋಧಕರು ಮಾತ್ರ ಕಾರ್ಯಶೀಲರಾಗಿ, ಪುರಾಣಗಳನ್ನು ಚರಿತ್ರೆಯಾಗಿಸಿಯೂ, ಚರಿತ್ರೆಯನ್ನು ಪುರಾಣಗಳನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಯಾವುದೇ ವ್ಯಕ್ತಿ ಸಮಾಜವನ್ನು ವಸ್ತುನಿಷ್ಠವಾಗಿ ಗ್ರಹಿಸಬೇಕಾದರೆ ತನ್ನ ಜಾತಿ, ಧರ್ಮದಿಂದಾಚೆಗೆ ನಿಂತು ಆಲೋಚಿಸಿದಾಗ, ವಿಶ್ಲೇಷಿಸಿದಾಗ ಮಾತ್ರ ವಾಸ್ತವಕ್ಕೆ ಹತ್ತಿರವಾದ ಸತ್ಯಗಳು ಗೋಚರಿಸಲು ಸಾಧ್ಯ. ಇದು ಚಾರಿತ್ರಿಕ ವ್ಯಕ್ತಿಗಳ ಕುರಿತು ಸಂಶೋಧನೆ ಕೈಗೊಳ್ಳುವವರಿಗೆ ಅನ್ವಯಿಸುತ್ತದೆ. ಬಸವಣ್ಣ, ಅಲ್ಲಮಪ್ರಭು, ಮಡಿವಾಳ ಮಾಚಿದೇವ, ಗಾಂಧೀಜಿ, ಅಂಬೇಡ್ಕರ್ ಕುರಿತು ಜಾತಿ ಚೌಕಟ್ಟಿನಿಂದ ಹೊರಗಿಟ್ಟು ಸಂಶೋಧನೆ ಮಾಡಿದಾಗ, ಇಡೀ ವಿಶ್ವಕ್ಕೆ ಹೊಂದುವಂತಹ ಚಿಂತನೆಯನ್ನು ದಾಖಲಿಸಲು ಸಾಧ್ಯವೆಂದು ಅವರು ಹೇಳಿದರು.

ಮುರುಘರಾಜೇಂದ್ರ ಮಠದ ಶ್ರೀಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ, ಶಿವಶರಣರು ಸೇರಿದಂತೆ ಸಮಾಜದ ಸಮಾನತೆಗಾಗಿ, ಅಭಿವೃದ್ಧಿಗೆ ಶ್ರಮಿಸಿದ ಸುಧಾರಕರನ್ನು ಒಂದು ಜಾತಿಗೆ, ಧರ್ಮಕ್ಕೆ ಸೀಮಿತಗೊಳಿಸಿ ನೋಡುವುದು ಸರಿಯಲ್ಲ. ಅವರ್ಯಾರು ಕೇವಲ ತಮ್ಮ ಜಾತಿಗಾಗಿ ಮಾತ್ರ ದುಡಿದರವಲ್ಲ. ಇಡೀ ಮನುಕುಲದ ಅಭಿವೃದ್ಧಿಗೆ ದುಡಿದವರು ಎಂಬ ಕನಿಷ್ಠ ಜ್ಞಾನವನ್ನು ಹೊಂದಿರುವುದು ಅಗತ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಂಶೋಧಕ ಡಾ.ಹಂ.ಪ.ನಾಗರಾಜಯ್ಯ, ಮಾಚಿದೇವ ಸಮಿತಿಯ ಅಧ್ಯಕ್ಷ ದೊಮ್ಮಲೂರು ಅಶೋಕ್, ಕೃತಿಕಾರ್ತಿ ಡಾ.ವರದಾ ಶ್ರೀನಿವಾಸ ಹಾಗೂ ಕಾರ್ತಿಕ್ ಶ್ರೀನಿವಾಸ ಮತ್ತಿತರರಿದ್ದರು.

ಇವತ್ತು ಸ್ವಚ್ಛ ಭಾರತದ ಕಲ್ಪನೆ ಹೊಸದಾಗಿ ಹುಟ್ಟಿದೆ ಎಂಬ ರೀತಿಯಲ್ಲಿ ಅಬ್ಬರದ ಪ್ರಚಾರ ಮಾಡಲಾಗುತ್ತಿದೆ. ಆದರೆ, ನಿಜವಾದ ಸ್ವಚ್ಛ ಭಾರತದ ಆಶಯವನ್ನು ಇಡೀ ಜಗತ್ತಿಗೆ ಸಾರಿದವರು ಬಸವಣ್ಣರಿಂದ ಮೊದಲುಗೊಂಡು ವಚನಕಾರರಾಗಿದ್ದಾರೆ. ಇವರು ಕೇವಲ ಬೀದಿಯಲ್ಲಿ ಬಿದ್ದಿರುವ ಕಸದ ಬಗ್ಗೆ ಮಾತ್ರ ಮಾತನಾಡಲಿಲ್ಲ. ಮನಸಿನಲ್ಲಿ, ಆಲೋಚನೆಯಲ್ಲಿ ತುಂಬಿರುವ ಮೇಲು, ಕೀಳು ಎಂಬ ಕಸದ ವಿರುದ್ಧ ಮಾತನಾಡಿ, ಸಮಾಜದ ಸ್ವಾಸ್ಥಕ್ಕೆ ದುಡಿದವರು.

-ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News