ಅನರ್ಹ ಶಾಸಕರಿಂದ ಪ್ರಜಾಪ್ರಭುತ್ವಕ್ಕೆ ದ್ರೋಹ: ದಿನೇಶ್‌ ಗುಂಡೂರಾವ್

Update: 2019-09-14 14:30 GMT

ಬೆಂಗಳೂರು, ಸೆ.14: ಅನರ್ಹ ಶಾಸಕರು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಿದ್ದಾರೆ. ಜನಾದೇಶವನ್ನು ಸ್ವಾರ್ಥಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಜನಾಭಿಪ್ರಾಯ ರೂಪುಗೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ತಳಮಟ್ಟದಿಂದ ಎಲ್ಲ ತಯಾರಿ, ಸಂಘಟನೆ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಪ್ರಸಕ್ತ ಉಪ ಚುನಾವಣೆ ನಮಗೆ ಹೆಚ್ಚು ಅವಕಾಶದಾಯಕವಾಗಿರಲಿದೆ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಆಡಳಿತ ವೈಫಲ್ಯ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಪ್ರವಾಹ ಪರಿಹಾರದ ಬಗೆಗಿನ ನಿರಾಸಕ್ತಿ, ರಾಜ್ಯದ ಬಗ್ಗೆ ಕೇಂದ್ರದ ನಿರ್ಲಕ್ಷದಿಂದ ಜನರು ಬೇಸತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಅವರು ಹೇಳಿದರು.

ಹೊಸಕೋಟೆಯಲ್ಲಿ ಸಭೆ: ರಾಜ್ಯದ ವಿವಿಧೆಡೆ ಕಾರ್ಯಕರ್ತರ ಸಭೆ ಸಂಘಟಿಸಲಿದ್ದು, ಹೊಸಕೋಟೆಯಲ್ಲಿ ಸೆ.21ರಂದು ಮೊದಲ ಸಭೆ ನಡೆಯಲಿದೆ. ಈ ಮೂಲಕ ಜನರಿಗೆ ಸತ್ಯಾಂಶಗಳನ್ನು ತಿಳಿಸುತ್ತೇವೆ. ಯಡಿಯೂರಪ್ಪ ಸರಕಾರದ ವೈಫಲ್ಯ, ನರೇಂದ್ರ ಮೋದಿ ಸರಕಾರದ ಅವೈಜ್ಞಾನಿಕ ಆರ್ಥಿಕ ನೀತಿಗಳು, ರಾಜ್ಯಕ್ಕೆ ಕೇಂದ್ರ ಎಸಗುತ್ತಿರುವ ದ್ರೋಹದ ಬಗ್ಗೆ ಜನರಿಗೆ ಹೇಳುತ್ತೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಎದುರಾದರೆ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಕುರಿತು ಚರ್ಚಿಸಲು ಚಿಕ್ಕಬಳ್ಳಾಪುರ, ಹುಣಸೂರು, ಕೆ.ಆರ್.ಪೇಟೆ, ಮಸ್ಕಿ, ರಾಣೆಬೆನ್ನೂರು, ಹಿರೇಕೆರೂರು ಕ್ಷೇತ್ರಗಳ ಪ್ರಮುಖ ನಾಯಕರ ಸಭೆಯನ್ನು ಕಾಂಗ್ರೆಸ್ ಕಚೇರಿಯಲ್ಲಿ ನಡೆಸಲಾಯಿತು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮುಖಂಡ ಕೇಶವರೆಡ್ಡಿ, ಶಾಸಕರಾದ ವಿ.ಮುನಿಯಪ್ಪ, ಶಿವಶಂಕರ ರೆಡ್ಡಿ, ಮಾಜಿ ಶಾಸಕ ಸಂಪಂಗಿ ಸೇರಿದಂತೆ ಇನ್ನಿತರ ಪ್ರಮುಖ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ದೇಶದ ಸ್ಥಿತಿ ಆತಂಕಕಾರಿಯಾಗಿದೆ. ಜನರ ಬದುಕು ದುಸ್ತರವಾಗಿದೆ. ಆದರೆ, ಲಜ್ಜೆಗೆಟ್ಟ ಮೋದಿ ಸರಕಾರ ಟ್ರೈಲರ್, ಸಿನಿಮಾ ಎಂಬ ಕಟ್ಟು ಕತೆಗಳನ್ನ ಹೇಳಿಕೊಂಡು ನೈಜ ಸಮಸ್ಯೆಗಳತ್ತ ಬೆನ್ನು ತಿರುಗಿಸಿ ಜನತೆಯನ್ನ ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News