ಬಿಜೆಪಿ ಹೈಕಮಾಂಡ್‌ಗೆ ಅನರ್ಹ ಶಾಸಕರ ಬಗ್ಗೆ ಆಸಕ್ತಿಯಿಲ್ಲ: ಎಚ್.ಡಿ.ದೇವೇಗೌಡ

Update: 2019-09-14 14:36 GMT

ಬೆಂಗಳೂರು, ಸೆ.14: ಬಿಜೆಪಿ ಹೈಕಮಾಂಡ್‌ಗೆ ಅನರ್ಹ ಶಾಸಕರ ಬಗ್ಗೆ ಯಾವುದೇ ಆಸಕ್ತಿಯಿಲ್ಲ. ಹೀಗಾಗಿ, ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಬಹುದು. ಅದಕ್ಕಾಗಿ ನಾವು ಸರ್ವ ರೀತಿಯಲ್ಲೂ ಸಿದ್ಧವಾಗಿರಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಶನಿವಾರ ನಗರದಲ್ಲಿನ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ನೆಲಮಂಗಲ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು, ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಹಾರಾಷ್ಟ್ರ, ಜಾರ್ಖಂಡ್ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಭೆಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿಯೂ ಯಾವಾಗ ಚುನಾವಣೆ ಬಂದರೂ ನಾವು ಸಿದ್ಧವಾಗಿರಬೇಕು ಎಂದು ದೇವೇಗೌಡ ಕರೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದಂತೆ ವಿರೋಧ ಪಕ್ಷಕ್ಕೂ ಹೆಚ್ಚಿನ ಪ್ರಾಮುಖ್ಯತೆಯಿದೆ. ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳನ್ನು ತುಳಿಯಲು ಕೇಂದ್ರದ ಬಿಜೆಪಿ ಸರಕಾರ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ಜೆಡಿಎಸ್ ಪಕ್ಷದ ಹಲವು ಶಾಸಕರು ಪಕ್ಷ ಬಿಡುತ್ತಾರೆಂದು ಕೆ.ಆರ್.ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣಗೌಡ ಹೇಳಿಕೆಗೆ ತಿರುಗೇಟು ನೀಡಿದ ಅವರು, ಜೆಡಿಎಸ್ ಪಕ್ಷವನ್ನು ಬಿಟ್ಟು ಯಾರು ಹೋಗುವುದಿಲ್ಲ. ನಮ್ಮ ಪಕ್ಷದಿಂದ ಯಾರೂ ಓಡಿ ಹೋಗುವುದಿಲ್ಲ. ಜಿ.ಟಿ.ದೇವೇಗೌಡ ತಮ್ಮ ಕ್ಷೇತ್ರದ ಕೆಲಸಗಳಿಗಾಗಿ ಹೋಗಿರುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಕೆಲವು ಸನ್ನಿವೇಶಗಳಲ್ಲಿ ನಾಯಕರು ಮಾತನಾಡಿರುವುದನ್ನು ಮಾಧ್ಯಮಗಳು ಹೆಚ್ಚು ಪ್ರಕಾಶಮಾನವಾಗಿ ಬಿತ್ತರಿಸುತ್ತಿವೆ. ಸಾ.ರಾ.ಮಹೇಶ್ ಹಾಗೂ ಜಿ.ಟಿ.ದೇವೇಗೌಡ ನಡುವೆ ಸ್ವಲ್ಪ ವ್ಯತ್ಯಾಸ ಇರಬಹುದು. ಆದರೆ, ಜಿ.ಟಿ.ದೇವೇಗೌಡ ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ದೇವಗೌಡ ತಿಳಿಸಿದರು.

ಸಿಬಿಐ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪಿ.ಚಿದಂಬರಂ ಕೇಂದ್ರ ಗೃಹ ಹಾಗೂ ವಿತ್ತ ಸಚಿವರಾಗಿದ್ದರು. ಅವರನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ದೇವೇಗೌಡ ಹೇಳಿದರು.

ಡಿ.ಕೆ.ಶಿವಕುಮಾರ್ ಪರ ಒಕ್ಕಲಿಗ ಸಮುದಾಯ ನಡೆಸಿದ ಪ್ರತಿಭಟನೆಯಲ್ಲಿ ನಾವು ಭಾಗವಹಿಸದೆ ಇರುವುದಕ್ಕೆ ಅನ್ಯಥಾ ಭಾವಿಸುವುದು ಬೇಡ. ಈಡಿ ವಿಚಾರಣೆಗಾಗಿ ಹೊಸದಿಲ್ಲಿಗೆ ತೆರಳುವ ಮುನ್ನ ಶಿವಕುಮಾರ್ ನನ್ನ ಮನೆಗೆ ಬಂದಿದ್ದರು. ಅವರಿಗೆ ಧೈರ್ಯ ಹೇಳಿ ಕಳುಹಿಸಿಕೊಟ್ಟೆ ಎಂದು ದೇವೇಗೌಡ ಹೇಳಿದರು.

ಒಕ್ಕಲಿಗರ ಪ್ರತಿಭಟನೆಯ ಮುನ್ನಾ ದಿನ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ನನ್ನನ್ನು ಭೇಟಿ ಮಾಡಿದ್ದರು. ಒಬ್ಬ ಮಾಜಿ ಪ್ರಧಾನಿಯಾಗಿ ನಾನು ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆದರೆ, ನಮ್ಮ ಪಕ್ಷದ ಶಾಸಕರು, ಮುಖಂಡರರಿಗೆ ಕಳುಹಿಸಿಕೊಡುವುದಾಗಿ ಹೇಳಿ ಕಳುಹಿಸಿದ್ದೆ ಎಂದು ಅವರು ಹೇಳಿದರು.

ಕನಕಪುರದಲ್ಲಿ ಶಿವಕುಮಾರ್ ಅವರ ತಾಯಿಯನ್ನು ಭೇಟಿ ಮಾಡಿದ ಕುಮಾರಸ್ವಾಮಿ, ಅವರಿಗೆ ಧೈರ್ಯ ಹೇಳಿ ಬಂದಿದ್ದಾರೆ. ಭಯದಿಂದ ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದು ಹೇಳುವುದು ತಪ್ಪು ಎಂದು ದೇವೇಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News