ಕೇಂದ್ರದಿಂದ ಒಕ್ಕೂಟ ವ್ಯವಸ್ಥೆ ನಾಶ ಮಾಡುವ ಹುನ್ನಾರ: ನಿವೃತ್ತ ನ್ಯಾ.ನಾಗಮೋಹನ್‌ ದಾಸ್

Update: 2019-09-14 14:42 GMT

ಬೆಂಗಳೂರು, ಸೆ.14: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಕಲಂ ರದ್ಧು ದೇಶದ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಹಾಗೂ ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರವೂ ಅಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಹೇಳಿದ್ದಾರೆ.

ಶನಿವಾರ ನಗರದ ಬಸವನಗುಡಿಯಲ್ಲಿರುವ ಜ್ಯೋತಿ ಬಸು ಭವನದಲ್ಲಿ ಸಮುದಾಯ, ಜನವಾದಿ ಮಹಿಳಾ ಸಂಘಟನೆ, ಎಸ್‌ಎಫ್‌ಐ ಹಾಗೂ ಡಿವೈಎಫ್‌ಐ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ‘ಕಾಶ್ಮೀರದಲ್ಲಿ 370 ವಿಧಿ ನಿಷ್ಕೃಿಯ’ ವಿಷಯ ಕುರಿತ ಉಪನ್ಯಾಸ-ಸಂವಾದದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರಕಾರವು ಪೂರ್ವ ನಿಯೋಜಿತವಾಗಿ ದುರುದ್ದೇಶ ಪೂರ್ವಕವಾಗಿಯೇ 370 ಕಲಂ ಅನ್ನು ರದ್ದು ಮಾಡಿದೆ. ಸಂವಿಧಾನದ ಅನುಚ್ಛೇಧ 356 ಅನ್ನು ದುರುಪಯೋಗ ಮಾಡಿಕೊಂಡು, ರಾಜ್ಯದ ಆಡಳಿತವನ್ನು ನಿಷ್ಕೃಿಯಗೊಳಿಸಿ, ಕೇಂದ್ರವೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. ಇದು ಸಂವಿಧಾನ ಉಲ್ಲಂಘನೆ ಮತ್ತು ದೇಶದ್ರೋಹದ ಕೆಲಸ ಎಂದು ಅವರು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕುರಿತು ಅಂದಿನ ಮಹಾರಾಜ ಹರಿಸಿಂಗ್ ಹಾಗೂ ಸರಕಾರದ ನಡುವೆ ನಡೆದ ಒಪ್ಪಂದವನ್ನು ಬದಲಿಸುವ ವೇಳೆ ಆಯಾ ರಾಜ್ಯದ ಶಾಸಕಾಂಗದ ಅನುಮತಿ ಪಡೆಯಬೇಕು. ಇದನ್ನು ಸಂವಿಧಾನದ 3 ನೆ ಪರಿಚ್ಛೇದದಲ್ಲಿ ಉಲ್ಲೇಖವಿದೆ. ಆದರೆ, ಏನೂ ಇಲ್ಲದೇ ಏಕಾಏಕಿ ಮಾಡಿರುವುದು ಸರಿಯಲ್ಲ ಎಂದರು.

ದೇಶದ ಯಾವುದೇ ರಾಜ್ಯದ ಗಡಿ ಬದಲಾಯಿಸಲು, ರಾಜ್ಯ ವಿಸ್ತರಣೆ ಹಾಗೂ ಕಡಿತ ಮಾಡಲು ಕೇಂದ್ರಕ್ಕೆ ಅವಕಾಶವಿದೆ. ಆದರೆ, ಅದಕ್ಕೂ ಮೊದಲು ಅಲ್ಲಿನ ಶಾಸಕಾಂಗದ ಅನುಮತಿ ಪಡೆಯಬೇಕಿದೆ. ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಅನುಮತಿಯಿಲ್ಲದೇ ನಿರ್ಧಾರ ಮಾಡಲಾಗಿದೆ. ಇದು ಜನರ ಹಿತದೃಷ್ಟಿಗೆ ವಿರುದ್ಧವಾದುದಾಗಿದೆ ಎಂದು ನುಡಿದರು.

ಕೇಂದ್ರ ಸರಕಾರವು ರಾಜ್ಯಾಡಳಿತವನ್ನು ನಿರ್ನಾಮ ಮಾಡಿ, ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲು ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ 90 ಲಕ್ಷ ಜನರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವಂತಹ ರಾಜಕೀಯ ನಿರ್ಧಾರ ಇದಾಗಿದೆ. ಪ್ರಜಾಪ್ರಭುತ್ವ, ಜಾತ್ಯತೀತ, ಸಮಾನತೆಯಂತಹ ಸಂವಿಧಾನದ ಮೂಲ ಆಶಯಗಳ ದಮನ ಮಾಡುವ ಮುನ್ಸೂಚನೆ ಇದಾಗಿದೆ ಎಂದು ನಾಗಮೋಹನ್‌ದಾಸ್ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರವನ್ನು ಕಾರ್ಪೋರೇಟ್, ಬಂಡವಾಳಶಾಹಿಗಳಿಗೆ ಮಾರಾಟ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. 370 ರದ್ಧು ಮಾಡುವ ಮೂಲಕ ಅಲ್ಲಿ ಮುಕ್ತ ಅವಕಾಶ ಸಿಕ್ಕಂತಾಗಿದೆ ಎಂದ ಅವರು, ಹಿಂದಿನ ಸಿಎಂ ಕಂಪೆನಿಗಳ ಸ್ಥಾಪನೆಗೆ ಭೂಮಿ ಗುತ್ತಿಗೆ ನೀಡಲು ಕರೆದಾಗ ಯಾರೂ ಮುಂದಾಗಲಿಲ್ಲ. ಇದೀಗ ಕೇಂದ್ರ ಅಲ್ಲಿನ ಯುವಜನರಿಗೆ ಉದ್ಯೋಗ ಕಲ್ಪಿಸುತ್ತೇವೆಂದು ಸುಳ್ಳು ಹರಡಲು ಮುಂದಾಗಿದೆ ಎಂದು ಟೀಕಿಸಿದರು.

ಕಣಿವೆ ರಾಜ್ಯದಲ್ಲಿ ಅಲ್ಲಿನ ರೈತರು ಸೇಬು ಬೆಳೆಯುವ ಮೂಲಕ ವಾರ್ಷಿಕ 16 ಸಾವಿರ ಕೋಟಿ ಆದಾಯ ಪಡೆಯುತ್ತಿದ್ದರು. ಕೇಂದ್ರದ ನಿರ್ಧಾರದಿಂದ ಇದೀಗ ಎಲ್ಲವೂ ನಿಂತುಹೋಗಿದೆ. ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಪ್ರವಾಸೋದ್ಯಮ ನಿಂತಿದ್ದು, ಇಡೀ ಆರ್ಥಿಕ ವ್ಯವಸ್ಥೆ ತಲ್ಲಣಗೊಂಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದೇಶದ ಸುಪ್ರೀಂಕೋರ್ಟ್ ಪೋಸ್ಟ್‌ಕಾರ್ಡ್ ವಿಷಯವನ್ನು ರಿಟ್ ಪ್ರಕರಣ ಎಂದು ಪರಿಗಣಿಸುತ್ತದೆ. ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 90 ಲಕ್ಷ ಜನರ ಮಾನವ ಹಕ್ಕುಗಳ ಉಲ್ಲಂಘನೆಯಾದರೆ ನೀಡಿದ ಹೇಳಿಕೆ ಸಮಂಜಸವಲ್ಲ. ಸುಪ್ರೀಂ ಹಲವು ಬಾರಿ ತಪ್ಪು ಮಾಡಿ ಕ್ಷಮೆಯಾಚಿಸಿದೆ, ಈ ವಿಷಯದಲ್ಲಿ ತಪ್ಪಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜನವಾದಿ ಮಹಿಳಾ ಸಂಘಟನೆಯ ವಿಮಲಾ, ದಲಿತ ಹಕ್ಕುಗಳ ಸಮಿತಿಯ ಸಂಚಾಲಕ ರಾಜಶೇಖರಮೂರ್ತಿ ಸೇರಿದಂತೆ ಮತ್ತಿತರರಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ, ಮೂಲಭೂತವಾದ ಅಧಿಕವಾಗಿದೆ. ಇದು ನಿರ್ಮೂಲನೆಯಾಗುವರೆಗೂ 370 ವಿಧಿ ಇರಬೇಕು. ಅಲ್ಲದೆ, ಕೇಂದ್ರವು 356 ಕಲಂ ದುರುಪಯೋಗ ಮಾಡಿಕೊಂಡು ರಾಜ್ಯಗಳ ಮೇಲೆ ದಾಳಿ ನಡೆಸುತ್ತಿದೆ. ಇದೇ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಬರುವ ಮೊದಲೇ ಎಚ್ಚೆತ್ತುಕೊಳ್ಳಬೇಕಿದೆ. ಇದನ್ನು ಗಂಭೀರವಾಗಿ ರಾಜಕೀಯ ದೃಷ್ಟಿಕೋನದಿಂದ ನೋಡಬೇಕಿದೆ.

-ಎಚ್.ಎನ್.ನಾಗಮೋಹನ್‌ ದಾಸ್, ನಿವೃತ್ತ ನ್ಯಾಯಮೂರ್ತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News