ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕಬೇಡಿ: ರೈತರಿಗೆ ಸಿಎಂ ಯಡಿಯೂರಪ್ಪ ಮನವಿ

Update: 2019-09-14 14:56 GMT

ಬೆಂಗಳೂರು, ಸೆ. 14: ‘ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕಬಾರದು. ಸಾಲವಿದ್ದರೆ ಅದನ್ನು ತೀರಿಸಲು ಪರ್ಯಾಯ ಮಾರ್ಗಗಳನ್ನು ಹುಡುಕೋಣ, ಅಗತ್ಯವಿದ್ದರೆ ಸಾಲಮನ್ನಾ ಮಾಡೋಣ, ಯಾರೂ ಆತ್ಮಹತ್ಯೆಗೆ ಮುಂದಾಗಬೇಡಿ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಶನಿವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ರೈತ ಚನ್ನಪ್ಪಗೌಡ ಅವರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿನ ರೈತರಿಗೆ ಅಗತ್ಯ ಎಲ್ಲ ನೆರವನ್ನು ಸರಕಾರ ನೀಡಲಿದೆ ಎಂದು ಅಭಯ ನೀಡಿದರು.

ಸಂತ್ರಸ್ತರ ನೆರವಿಗೆ ಚರ್ಚೆ: ಬೆಳಗಾವಿ ಜಿಲ್ಲೆ ನೆರೆ ಸಂತ್ರಸ್ತರ ಪುನರ್ವಸತಿ, ಮನೆ ನಿರ್ಮಿಸಿ ಕೊಡುವುದು, ಬಾಕಿ ಇರುವ ನೀರಾವರಿ ಯೋಜನೆಗಳ ತ್ವರಿತಗತಿ ಪೂರ್ಣಗೊಳಿಸುವ ಸಂಬಂಧ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.

ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿದ್ದು, ಕ್ಷೇತ್ರಗಳ ರಸ್ತೆ, ಸೇತುವೆ ಸೇರಿ ಮೂಲ ಸೌಕರ್ಯ ಅಭಿವೃದ್ಧಿ ತಲಾ 25 ಕೋಟಿ ರೂ. ಅನುದಾನ ನೀಡಲು ಶಾಸಕರು ಕೋರಿದ್ದಾರೆ ಎಂದ ಅವರು, ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರ ನೀಡುವ ಭರವಸೆ ನೀಡಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News