ಸಮಾನ ನಾಗರಿಕ ಸಂಹಿತೆ ಕಾರ್ಯಸಾಧುವಲ್ಲ : ಮುಸ್ಲಿಂ ಸಂಘಟನೆಗಳ ಒಕ್ಕೂಟ

Update: 2019-09-15 04:12 GMT

ಹೊಸದಿಲ್ಲಿ: ಅಪಾರ ವೈವಿಧ್ಯತೆಯಿಂದ ಕೂಡಿದ ಭಾರತದಂಥ ದೇಶಗಳಲ್ಲಿ ಸಮಾನ ನಾಗರಿಕ ಸಂಹಿತೆ ಕಾರ್ಯಸಾಧುವೂ ಅಲ್ಲ; ಅದನ್ನು ಅನುಷ್ಠಾನಗೊಳಿಸಲು ಸಾಧ್ಯವೂ ಇಲ್ಲ ಎಂದು ಮುಸ್ಲಿಂ ಅಲ್ಪಸಂಖ್ಯಾತ ಸಂಘಟನೆಗಳು ಪ್ರತಿಪಾದಿಸಿವೆ.

ಸಮಾನ ನಾಗರಿಕ ಸಂಹಿತೆ ಬಗ್ಗೆ ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದ ಬೆನ್ನಲ್ಲೇ ದೇಶಾದ್ಯಂತ ಮುಸ್ಲಿಂ ಸಂಘಟನೆಗಳು ಸಮಾನ ನಾಗರಿಕ ಸಂಹಿತೆ ಬಗ್ಗೆ ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿವೆ.

ಸಮಾನ ನಾಗರಿಕ ಸಂಹಿತೆಯ ಪರಿಕಲ್ಪನೆಯನ್ನೇ ಪ್ರಶ್ನಿಸಿರುವ ಸಂಘಟನೆಗಳು, ಒಂದು ಧರ್ಮದ ವಿವಿಧ ಸಮುದಾಯಗಳ ನಡುವೆಯೇ ಭಿನ್ನವಾದ ವೈಯಕ್ತಿಕ ಕಾನೂನುಗಳು, ಸಾಂಸ್ಕೃತಿಕ ಹಿನ್ನೆಲೆಗಳಿವೆ ಎಂದು ಪ್ರತಿಪಾದಿಸಿವೆ.

ಕಳೆದ ವರ್ಷದ ಆ. 31ರಂದು ಕಾನೂನು ಆಯೋಗವು ಕುಟುಂಬ ಕಾನೂನುಗಳ ಬಗ್ಗೆ ಬಿಡುಗಡೆ ಮಾಡಿದ ಸಲಹಾ ಪತ್ರವನ್ನು ಕೂಡಾ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹಾಗೂ ಜಮಿಯತ್ ಉಲಾಮಾ ಹಿಂದ್‌ನಂಥ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳು ಉಲ್ಲೇಖಿಸಿದ್ದಾರೆ.

"ಸಮಾನ ನಾಗರಿಕ ಸಂಹಿತೆ ಈ ಹಂತದಲ್ಲಿ ಅಗತ್ಯವೂ ಅಲ್ಲ; ಅಪೇಕ್ಷಣೀಯವೂ ಅಲ್ಲ" ಎಂಬ ಆಯೋಗದ ಅಭಿಪ್ರಾಯವನ್ನು ಎಐಎಂಪಿಎಲ್‌ಬಿ ಸ್ವಾಗತಿಸಿದೆ. ಕಾನೂನು ಆಯೋಗ ಸಲಹೆ ಮಾಡಿದಂತೆ ವೈಯಕ್ತಿಕ ಕಾನೂನಿನಲ್ಲಿ ಬದಲಾವಣೆ ತರಲು ಮತ್ತು ಸುಧಾರಣೆ ತರಲು ತಮ್ಮ ಸಹಮತ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಕೇವಲ ಸಾಮಾಜಿಕ ಚೌಕಟ್ಟಿನಲ್ಲೇ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದೆ.

"ನಮ್ಮಲ್ಲಿ ವೈವಿಧ್ಯಮಯ ವೈಯಕ್ತಿಕ ಕಾನೂನುಗಳಿವೆ. ಎಲ್ಲರಿಗೂ ಸಮಾನ ನಾಗರಿಕ ಸಂಹಿಸತೆ ಅನ್ವಯಿಸುವುದು ಹೇಗೆ? ಸಂಸತ್ತಿನಲ್ಲಿ ತನ್ನ ಬಹುಮತವನ್ನು ಬಳಸಿಕೊಂಡು ಸಮಾನ ನಾಗರಿಕ ಸಂಹಿತೆ ತರಲು ಮುಂದಾದರೆ, ಅನುಷ್ಠಾನ ವಿಚಾರದಲ್ಲಿ ತೊಂದರೆಗಳನ್ನು ತಾನೇ ಆಹ್ವಾನಿಸಿಕೊಂಡಂತಾಗುತ್ತದೆ" ಎಂದು ಎಐಎಂಪಿಎಲ್‌ಬಿ ಸದಸ್ಯ ಕಮಾಲ್ ಫರೂಕಿ ಹೇಳಿದ್ದಾರೆ.

ಸಮಾನ ನಾಗರಿಕ ಸಂಹಿತೆ ಅನುಷ್ಠಾನ ಅಸಾಧ್ಯ ಎಂದು ಜಮಿಯತ್ ಉಲಾಮಾ ಇ ಹಿಂದ್‌ನ ಹಿರಿಯ ಪದಾಧಿಕಾರಿ ನಿಯಾಝ್ ಅಹ್ಮದ್ ಫರೂಕಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News