ಸೋತವರು ಅನುಭವ ಹಂಚಿಕೊಳ್ಳಬಹುದು, ಕಾನೂನು ರೂಪಿಸಲಾಗಲ್ಲ: ಮಾಜಿ ಸಚಿವ ಸಿಂಧ್ಯಾ

Update: 2019-09-16 11:56 GMT

ಬೆಂಗಳೂರು, ಸೆ.16 : ರಾಜಕೀಯದಲ್ಲಿ ಎಷ್ಟೇ ಅನುಭವವಿದ್ದರೂ ಸೋತ ನಂತರ ಗೆದ್ದಿರುವವರಿಗಿಂತ ದೊಡ್ಡವರಾಗಲು ಸಾಧ್ಯವಿಲ್ಲ. ಸೋತವರು ಅನುಭವಿಗಳಾದರೂ ಅವರ ಅನುಭವವನ್ನು ಹಂಚಿಕೊಳ್ಳಬಹುದೇ ವಿನಃ ಕಾನೂನು ಮಾಡುವಂತಹ ವಿಷಯದಲ್ಲಿ ಕಾರ್ಯಶೀಲರಾಗುವುದಕ್ಕೆ ಅಸಾಧ್ಯ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ.

ಸೋಮವಾರ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಪ್ರಸ್ತುತ ರಾಜಕೀಯದಿಂದ ದೂರವಿದ್ದಾರೆ, ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದೇನೆ, ಸೋತವರು ಎಷ್ಟೇ ಅನುಭವಿಗಳಾದರೂ ಕಾನೂನು ನಡೆಸುವ ವಿಚಾರದಲ್ಲಿ ಕಾರ್ಯಶೀಲರಾಗುವುದು ಸಾಧ್ಯವಿಲ್ಲ ಎಂದರು.

ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಬಗ್ಗೆ, ಭೂಮಿ ಹಾಗೂ ಅಂತರ್ಜಲ ಕಾಪಾಡುವುದರ ಬಗ್ಗೆ ಹಾಗೂ ಪರಿಸರವನ್ನು ಕಾಪಾಡುವಂತಹ ವಿಚಾರವಾಗಿ ಸ್ಕೌಟ್ಸ್ ಅಂಡ್ ಗೈಡ್ಸ್ ಜೊತೆಯಲ್ಲಿ ಎನ್ನೆಸ್ಸೆಸ್, ಎನ್‌ಸಿಸಿ, ರೆಡ್‌ಕ್ರಾಸ್ ಸಂಸ್ಥೆಗಳು ಅತ್ಯಂತ ಉತ್ತಮ ಕೆಲಸಗಳನ್ನು ಮಾಡುತ್ತಿವೆ. ಈಗ ನಾವು ಈ ಸಂಸ್ಥೆಗಳ ಜೊತೆ ಸೇರಿ ಪರಿಸರವನ್ನು ಸಂರಕ್ಷಣೆ ಮಾಡುವ ವಿಚಾರವಾಗಿ ನನ್ನ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದೇನೆ ಎಂದು ಹೇಳಿದರು.

1973-74 ರಿಂದ ನಾನು ನನ್ನ ಕೈಲಾದಮಟ್ಟಿಗೆ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ಜನರು ನನಗೆ ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಬರದ ರೀತಿಯಲ್ಲಿ ನಾನು ನಡೆದುಕೊಳ್ಳಬೇಕಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News