ಯುವ ಸಮುದಾಯ ಸಮಯ ವ್ಯರ್ಥ ಮಾಡಬಾರದು: ಮಾಜಿ ಸಿಎಂ ವೀರಪ್ಪ ಮೊಯ್ಲಿ

Update: 2019-09-16 12:52 GMT

ಬೆಂಗಳೂರು, ಸೆ.16: ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ. ಪ್ರತಿಯೊಂದು ಕ್ಷಣವೂ ಅತ್ಯಮೂಲ್ಯವಾದುದಾಗಿದ್ದು, ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಹೇಳಿದ್ದಾರೆ.

ಸೋಮವಾರ ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ನೆರವಾಗುವ ’ಒಪನ್ ಹಾರ್ಟ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸಮಯ ಎಂಬುದು ಬಹುಮುಖ್ಯವಾದುದಾಗಿದೆ. ಯಾರೂ ಸಮಯ ವ್ಯರ್ಥ ಮಾಡಬಾರದೆಂದು ಸಲಹೆ ನೀಡಿದರು.

ಸಮಯ ಸೋಲು ಮತ್ತು ಗೆಲುವು ಎರಡಕ್ಕೂ ಕಾರಣವಾಗುತ್ತದೆ. ಆದರೆ, ಯುವ ಸಮುದಾಯ ಸಮಯಕ್ಕೆ ಆದ್ಯತೆ ನೀಡುವುದನ್ನು ಅರಿಯಬೇಕು. ಹೊಸ ಹೊಸ ಆಲೋಚನೆ ಮಾಡಬೇಕು. ಅದು ಹೊಸ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಅವರು ನುಡಿದರು.

ಸಮಯ ಹೋದರೆ ಅದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ನಾವು ಜೀವನದಲ್ಲಿ ಯಾರಿಂದಲೂ ಕಲಿಯಲಾರದ್ದನ್ನು ಸಮಯ-ಸಂದರ್ಭ ಕಲಿಸುತ್ತದೆ. ಸಮಯ ನಿಲ್ಲದ ಹೊತ್ತಿನಂತೆ. ಅದನ್ನು ನಾವೇ ಅನುಸರಿಸಿಕೊಂಡು ಹೋದಾಗ ಮಾತ್ರ ಅದು ನಮ್ಮ ಸ್ವತ್ತಾಗುತ್ತದೆ. ಆಗ ಯಶಸ್ಸು ನಮ್ಮದಾಗುತ್ತದೆ ಎಂದರು.

ಸಮಯ ಎಂಬುದು ನಿಂತ ನೀರಲ್ಲ. ಸಮಯಕ್ಕಾಗಿ ನಾವೂ ಕಾಯಬೇಕೆ ಹೊರತು ಸಮಯ ನಮಗಾಗಿ ಕಾಯುವುದಿಲ್ಲ. ‘ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ನಾಣ್ಣುಡಿಯಂತೆ ಒಂದು ಬಾರಿ ಹೋದ ಸಮಯ ಮತ್ತೆಂದಿಗೂ ನಮ್ಮ ಜೀವನದಲ್ಲಿ ಬಾರದು ಎಂದು ಹೇಳಿದರು.

ಬಿಜೆಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜರೋಮ್ ಸ್ಟಾಲಿಸ್ ಲೌಸ್ ಡಿಸೋಜರ್ ಮಾತನಾಡಿ, ಇಸ್ರೋ ಅಧ್ಯಕ್ಷ ಶಿವನ್ ಹಳ್ಳಿಗಾಡಿನ ಕಡು ಬಡತನದಿಂದ ಬಂದ ವ್ಯಕ್ತಿಯಾಗಿದ್ದಾರೆ. ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ಅಂತಹವರು ನಮಗೆ ಮಾದರಿಯಾಗಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News