ಸಂಘ-ಸಂಸ್ಥೆಗಳಿಗೆ ಧನ ಸಹಾಯ ಯೋಜನೆ ಮರು ಜಾರಿ ?

Update: 2019-09-16 12:12 GMT

ಬೆಂಗಳೂರು, ಸೆ.16: ಹಿಂದಿನ ಸರಕಾರದ ಅವಧಿಯಲ್ಲಿ ಸ್ಥಗಿತಗೊಳಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಘ-ಸಂಸ್ಥೆಗಳಿಗೆ ನೀಡುತ್ತಿದ್ದ ಧನಸಹಾಯವನ್ನು ನೀಡುವ ಸಂಬಂಧ ಸರಕಾರ ಮರುಚಿಂತನೆ ನಡೆಸಲು ಮುಂದಾಗಿದೆ. 

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ನೀಡುತ್ತಿದ್ದ ಧನ ಸಹಾಯವನ್ನು ಹಿಂದಿನ ಮೈತ್ರಿ ಸರಕಾರದ ಅವಧಿಯಲ್ಲಿ ಇಲಾಖೆ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ರದ್ಧುಪಡಿಸುವುದಾಗಿ ಘೋಷಣೆ ಮಾಡಿದ್ದರು. ಯೋಜನೆಯಲ್ಲಿರುವ ಲೋಪಗಳನ್ನು ಸರಿಪಡಿಸಲು ವಿಫಲವಾಗಿದ್ದಕ್ಕೆ ಆಕ್ರೋಶವೂ ವ್ಯಕ್ತವಾಗಿತ್ತು.

ಇದೀಗ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಯೋಜನೆ ಮರುಜಾರಿ ಹಾಗೂ ನಿಯಮಗಳ ಪರಿಷ್ಕರಣೆ ಸಂಬಂಧ ಚರ್ಚೆ ನಡೆಸುತ್ತಿದೆ ಎನ್ನಲಾಗಿದ್ದು, ಸದ್ಯದಲ್ಲಿಯೇ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇಲಾಖೆಯಿಂದ ಸಂಘ ಸಂಸ್ಥೆಗಳಿಗೆ ಧನ ಸಹಾಯ, ಚಿತ್ರಕಲಾವಿದರ ಹಾಗೂ ಶಿಲ್ಪ ಕಲಾವಿದರಿಗೆ ಕೃತಿಗಳ ಪ್ರದರ್ಶನ ನಡೆಸಲು ಸಹಾಯಧನ, ಅಸಂಘಟಿತ ಜನಪದ ಹಾಗೂ ಸಂಗೀತ ಕಲಾವಿದರಿಗೆ ವಾದ್ಯ ಪರಿಕರ ಹಾಗೂ ವೇಷ ಭೂಷಣ ಖರೀದಿಗೆ ಧನ ಸಹಾಯ ನೀಡಲಾಗುತ್ತದೆ.

ಆದರೆ, ಕೆಲವು ಸಂಘಗಳು ನಕಲಿ ಬಿಲ್, ನಕಲಿ ಸುದ್ದಿಪತ್ರಿಕೆ ತುಣುಕು ಸೃಷ್ಟಿ ಮಾಡಿಕೊಂಡು ವಾಮಮಾರ್ಗದ ಮೂಲಕ ಧನ ಸಹಾಯ ಪಡೆಯಲು ಪ್ರಯತ್ನ ನಡೆಸಿದ ಪ್ರಕರಣಗಳು ವರದಿಯಾಗಿದ್ದರು. ಹೀಗಾಗಿ, ಇದನ್ನು ರದ್ದು ಮಾಡಲಾಗಿತ್ತು. ಧನ ಸಹಾಯ ಮಾರ್ಗಸೂಚಿಯನ್ನು ಹಿಂಪಡೆದಿದ್ದು, ಆನ್‌ಲೈನ್ ಅರ್ಜಿ ಸಲ್ಲಿಕೆಯನ್ನೂ ನಿಲ್ಲಿಸಲಾಗಿದೆ. ಅಲ್ಲದೆ, ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಧನ ಸಹಾಯಕ್ಕೆ ಅವಕಾಶ ನೀಡಿಲ್ಲ.

ಮಾಹಿತಿ ಪಡೆದ ಸಚಿವ?: ಸಿ.ಟಿ.ರವಿಯು ಸಂಸ್ಕೃತಿ ಇಲಾಖೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಭೆಗಳನ್ನು ನಡೆಸಿ ಧನ ಸಹಾಯ ಕುರಿತು ಮಾಹಿತಿ ಪಡೆದಿದ್ದಾರೆ. ಯೋಜನೆ ಮರು ಜಾರಿಯ ಸಂಬಂಧ ಅನುಸರಿಸಬೇಕಾದ ಮಾನದಂಡ, ನಕಲಿ ಸಂಸ್ಥೆಗಳ ದುರ್ಬಳಕೆ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News