ಶೀಘ್ರದಲ್ಲಿಯೇ ಹೊರ ಪ್ಲಾಸ್ಟಿಕ್‌ಗೆ ಕಡಿವಾಣ: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2019-09-16 12:23 GMT

ಬೆಂಗಳೂರು, ಸೆ.16: ರಾಜಧಾನಿ ಬೆಂಗಳೂರಿಗೆ ಹೊರ ಪ್ರದೇಶದಿಂದ ಬರುತ್ತಿರುವ ಪ್ಲಾಸ್ಟಿಕ್ ವಸ್ತುಗಳಿಗೆ ಶೀಘ್ರದಲ್ಲಿಯೇ ಕಡಿವಾಣ ಹಾಕಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಹೇಳಿದರು.

ಸೋಮವಾರ ನಗರದ ಕಂದಾಯ ಭವನದ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ, ಪ್ಲಾಸ್ಟಿಕ್ ಬಳಕೆ ನಿಷೇಧ ಹಾಗೂ ಘನತ್ಯಾಜ್ಯ ವಿಲೇವಾರಿ ಕುರಿತ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನುದ್ದೇಶಿಸಿ ಅವರು ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯ ಮಳಿಗೆಗಳು, ಕಾರ್ಖಾನೆಗಳಲ್ಲಿರುವ ಪ್ಲಾಸ್ಟಿಕ್‌ಗಳನ್ನು ಜಪ್ತಿ ಮಾಡಿ, ಅರಿವು ಮೂಡಿಸುವ ಕಾರ್ಯ ಸಾಗುತ್ತಿದೆ. ಆದರೆ, ಹೊರ ಪ್ರದೇಶಗಳಿಂದ ಮಾರುಕಟ್ಟೆಗಳಿಗೆ ಪ್ಲಾಸ್ಟಿಕ್ ಉತ್ಪನ್ನಗಳು ಬರುತ್ತಿದ್ದು, ಇದಕ್ಕೆ ಸಂಪೂರ್ಣವಾಗಿ ನಿಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.

ಬೆಂಗಳೂರಿನಲ್ಲಿಯೇ ಪ್ರತಿ ದಿನ ಸಾವಿರಾರು ಟನ್ ಕಸ ಉತ್ಪಾದನೆ ಆಗುತ್ತಿದೆ. ಇದನ್ನು ಹೊರವಲಯದ ಭೂ-ಭರ್ತಿ ಸ್ಥಳಗಳಲ್ಲಿ ಎಸೆಯುತ್ತಿದ್ದೇವೆ. ಆದರೆ, ಈ ವ್ಯಾಪ್ತಿಯ ಹಳ್ಳಿಗಳಲ್ಲಿ ರಸಾಯನಿಕ ಅಂಶ ಹೆಚ್ಚಾಗುತ್ತಿದ್ದು, ಕುಡಿಯುವ ನೀರು ಸಹ ಕಪ್ಪುಬಣ್ಣದಲ್ಲಿ ಬರಲು ಆರಂಭಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿಂದೆ ನಮ್ಮ ಪೂರ್ವಜರು ಪ್ಲಾಸ್ಟಿಕ್ ಮುಕ್ತ ಪರಿಸರ ನೀಡಿದರು. ಆದರೆ, ನಾವು ಪ್ಲಾಸ್ಟಿಕ್ ಬಳಕೆ ಮಾಡಿ, ಮುಂದಿನ ಪೀಳಿಗೆಗೆ ವಿಷ ನೀಡಲು ಮುಂದಾಗಿದ್ದೇವೆ ಎಂದ ಅವರು, ಪ್ಲಾಸ್ಟಿಕ್ ನಿಷೇಧದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಭವನಕ್ಕೆ ಬೆಂಗಳೂರಿನ ನಾಯಂಡಹಳ್ಳಿ ಸಮೀಪ ಅರ್ಧ ಎಕರೆ ಜಮೀನು ನೀಡಿ 5 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಆದರೆ, ಭವನ ನಿರ್ಮಾಣಕ್ಕೆ ಇನ್ನೂ ಹಣದ ಅಗತ್ಯವಿದ್ದು, ಬಿಬಿಎಂಪಿ ನೆರವು ನೀಡಲಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಉಪ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ಬೆಂಗಳೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಸೋಮಶೇಖರ್ ಗಾಂಧಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News