ಬಿಬಿಎಂಪಿಯಲ್ಲಿ ಆಡಳಿತ ವಿಕೇಂದ್ರೀಕರಣ: ರಾಜ್ಯ ಸರಕಾರ ತೀರ್ಮಾನ

Update: 2019-09-16 12:30 GMT

ಬೆಂಗಳೂರು, ಸೆ.16: ಬಿಬಿಎಂಪಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಆಡಳಿತ ವ್ಯವಸ್ಥೆಯಲ್ಲಿ ಎಲ್ಲ ಕಡತಗಳನ್ನು ಸಂಬಂಧಪಟ್ಟ ವಲಯ ಜಂಟಿ ಆಯುಕ್ತರು ಮತ್ತು ವಿಶೇಷ ಆಯುಕ್ತರು, ಅಪರ ಆಯುಕ್ತರ ಮೂಲಕ ಆಯುಕ್ತರಿಗೆ ಅನುಮೋದನೆಗಾಗಿ ಸಲ್ಲಿಸಲಾಗುತ್ತಿದೆ. ಎಲ್ಲ ನಿರ್ಣಯಗಳನ್ನು ಕೇಂದ್ರೀಕೃತವಾಗಿ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿರುವುದಲ್ಲೇ, ಆಯುಕ್ತರಿಗೆ ಕೆಲಸದ ತೀವ್ರ ಒತ್ತಡವಿರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಬಿಬಿಎಂಪಿಯಲ್ಲಿ ಆಡಳಿತವನ್ನು ವಿಕೇಂದ್ರೀಕರಣಗೊಳಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ.

ಬಿಬಿಎಂಪಿಯ ಆಯುಕ್ತರ ಕಾರ್ಯದ ಹೊರೆಯನ್ನು ಕಡಿಮೆ ಮಾಡುವ ಮತ್ತು ಬಿಬಿಎಂಪಿಯ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಎಂಟು ವಲಯಗಳನ್ನು ಆಯುಕ್ತರ ಕಾರ್ಯಪರಿಧಿಯಿಂದ ಬಿಡುಗಡೆಗೊಳಿಸಿ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ವಿಶೇಷ ಆಯುಕ್ತರು ಮತ್ತು ಅಪರ ಆಯುಕ್ತರಿಗೆ ತಲಾ ಎರಡು ವಲಯಗಳಂತೆ ವಹಿಸಲು ಸರಕಾರ ನಿರ್ಧರಿಸಿದೆ.

ಪ್ರಸ್ತುತ ವ್ಯವಸ್ಥೆಯಲ್ಲಿ ವಲಯಗಳಿಂದ ಆಯುಕ್ತರ ಅನುಮೋದನೆಗಾಗಿ ಸಲ್ಲಿಸಲ್ಪಡುತ್ತಿದ್ದ ಎಲ್ಲ ಪ್ರಸ್ತಾವನೆಗಳ ಕುರಿತು ನಿರ್ಧರಿಸುವ ಅಧಿಕಾರವನ್ನು ಆಯುಕ್ತರಿಂದ ಸಂಬಂಧಪಟ್ಟ ವಿಶೇಷ ಆಯುಕ್ತರು ಮತ್ತು ಅಪರ ಆಯುಕ್ತರಿಗೆ ಪ್ರತ್ಯಾಯೋಜಿಸಿ ಅಧಿಕಾರಿ ವಿಕೇಂದ್ರೀಕರಣ ಮಾಡಲಾಗಿದೆ.

ಈ ವಿಕೇಂದ್ರೀಕರಣದಿಂದ ವಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶೀಘ್ರ ನಿರ್ಧಾರವನ್ನು ವಲಯ ಮಟ್ಟದಲ್ಲೇ ಕೈಗೊಳ್ಳುವುದರಿಂದ ಕಾರ್ಯದಕ್ಷತೆ ಹೆಚ್ಚುವುದಲ್ಲದೇ ಸಾರ್ವಜನಿಕ ಕೆಲಸಕಾರ್ಯಗಳಿಗೆ ಸಮಯದ ಉಳಿತಾಯ ಆಗುತ್ತದೆ.

ಬಿಬಿಎಂಪಿಯ ಎಂಟು ವಲಯಗಳನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 4 ವಿಶೇಷ ಆಯುಕ್ತರು ಮತ್ತು ಅಪರ ಆಯುಕ್ತರಿಗೆ ತಲಾ ಎರಡು ವಲಯಗಳಂತೆ ವಹಿಸಲಾಗಿದೆ. ಪೂರ್ವ ಮತ್ತು ಯಲಹಂಕ ವಲಯ(ವಿಶೇಷ/ಅಪರ ಆಯುಕ್ತರು(ಯೋಜನೆ)), ದಕ್ಷಿಣ ಮತ್ತು ರಾಜರಾಜೇಶ್ವರಿನಗರ(ವಿಶೇಷ/ಅಪರ ಆಯುಕ್ತರು(ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನ)), ಪಶ್ಚಿಮ ಮತ್ತು ದಾಸರಹಳ್ಳಿ(ವಿಶೇಷ/ಅಪರ ಆಯುಕ್ತರು(ಆಡಳಿತ)), ಮಹದೇವಪುರ ಮತ್ತು ಬೊಮ್ಮನಹಳ್ಳಿ(ವಿಶೇಷ/ಅಪರ ಆಯುಕ್ತರು(ಘನತ್ಯಾಜ್ಯ ನಿರ್ವಹಣೆ)).

ಆಯುಕ್ತರು ಬಿಬಿಎಂಪಿಯ ಸಮಗ್ರ ಮೇಲುಸ್ತುವಾರಿಯ ಜವಾಬ್ದಾರಿ ಹೊಂದಿದ್ದು, ನೀತಿ ವಿಷಯಗಳು ಮತ್ತು ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಜವಾಬ್ದಾರಿ ಹೊಂದಿರುತ್ತಾರೆ. ಪಾಲಿಕೆಯ ಆಯವ್ಯಯ, ವಿಶೇಷ ಅನುದಾನಗಳು, ಆಯವ್ಯಯದಲ್ಲಿ ಸೇರಿರದ ಯೋಜನೆಗಳ ಅನುಮೋದನೆ ಮುಂತಾದ ವಿಷಯಗಳ ಜವಾಬ್ದಾರಿ ಆಯುಕ್ತರಿಗಿದೆ. ವಿಶೇಷ/ಅಪರ ಆಯುಕ್ತರುಗಳಿಗೆ ಹಂಚಿಕೆಯಾಗದ ವಿಷಯ ಅಥವಾ ಶಾಖೆಗಳು ಆಯುಕ್ತರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News