​ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ: ಆಚರಣೆ ಹೇಗೆ ಗೊತ್ತೇ ?

Update: 2019-09-17 04:17 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಇಂದು 69ನೇ ವರ್ಷಕ್ಕೆ ಕಾಲಿಡುತ್ತಿದ್ದು, ಗುಜರಾತ್‌ನ ಗಾಂಧಿನಗರದಲ್ಲಿರುವ ತಾಯಿಯನ್ನು ಭೇಟಿ ಮಾಡಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಹೀರಾಬೆನ್ (98) ತಮ್ಮ ಕಿರಿಯ ಮಗ ಪಂಕಜ್ ಮೋದಿ ಜತೆಗೆ ಗಾಂಧಿನಗರ ಬಳಿಕ ರೈಸಿನ್ ಗ್ರಾಮದಲ್ಲಿ ವಾಸವಿದ್ದಾರೆ.

ಸೋಮವಾರ ರಾತ್ರಿ ಗಾಂಧಿನಗರದ ರಾಜಭವನದಲ್ಲಿ ತಂಗಿದ್ದ ಮೋದಿಯವರು ಮುಂಜಾನೆ ತಾಯಿಯನ್ನು ಭೇಟಿ ಮಾಡಿ ಬಳಿಕ ಗಾಂಧಿನಗರದಿಂದ ನರ್ಮದಾ ಜಿಲ್ಲೆಯ ಕೆವಾಡಿಯಾಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಏಕತೆಯ ಪ್ರತಿಮೆ, ಸರ್ದಾರ್ ಸರೋವರ ಅಣೆಕಟ್ಟು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸುವರು ಎಂದು ಅಧಿಕೃತ ಮೂಲಗಳು ಹೇಳಿವೆ.

ಸರ್ದಾರ್ ಪಟೇಲ್ ಅವರ ಜನ್ಮ ದಿನವಾದ ಅ.31ರಂದು ಕಳೆದ ವರ್ಷ ನರೇಂದ್ರ ಮೋದಿಯವರು ವಿಶ್ವದ ಅತಿ ಎತ್ತರದ ಪ್ರತಿಮೆ ಎನಿಸಿದ ಏಕತೆಯ ಪ್ರತಿಮೆ ಅನಾವರಣಗೊಳಿಸಿದ್ದರು.

ತಮ್ಮ ಭೇಟಿ ವೇಳೆ ಮೋದಿ ನರ್ಮದಾ ತಾಯಿಯ ಪೂಜೆ ನೆರವೇರಿಸುವರು ಬಳಿಕ ಸರ್ದಾರ್ ಸರೋವರ ಅಣೆಕಟ್ಟಿನ ನಿಯಂತ್ರಣ ಕೊಠಡಿಗೆ ಭೇಟಿ ನೀಡುವರು. ಗುರುದೇಶ್ವರ ಗ್ರಾಮದ ದತ್ತಾತ್ರೇಯ ಮಂದಿರಕ್ಕೆ ಹಾಗೂ ಮಕ್ಕಳ ಉದ್ಯಾನವನಕ್ಕೂ ತೆರಳಲಿರುವ ಪ್ರಧಾನಿ, ಕೆವಾಡಿಯಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವರು.

2017ರಲ್ಲಿ ನರ್ಮದಾ ಅಣೆಕಟ್ಟು ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಗರಿಷ್ಠ ಮಟ್ಟ ಅಂದರೆ 138.68 ಮೀಟರ್ ನೀರು ಸಂಗ್ರಹವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಪೂಜೆ ಸಲ್ಲಿಸಲಿದ್ದಾರೆ. ಇದೇ ವೇಳೆ ಪ್ರಧಾನಿ, ನಮಾಮಿ ನರ್ಮದಾ ವುಹೋತ್ಸವಕ್ಕೆ ಚಾಲನೆ ನೀಡುವರು. ಈ ಅಣೆಕಟ್ಟು ಗುಜರಾತ್‌ನ 131 ನಗರ- ಪಟ್ಟಣಗಳಿಗೆ ಹಾಗೂ ರಾಜ್ಯದ 9633 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಿದೆ. 15 ಜಿಲ್ಲೆಗಳ 3112 ಗ್ರಾಮಗಳ 18.54 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಕಲ್ಪಿಸಲಿದೆ.

ಕಳೆದ ವರ್ಷ ಮೋದಿ ತಮ್ಮ ಕ್ಷೇತ್ರವಾದ ವಾರಣಾಸಿಯಲ್ಲಿ ಶಾಲಾ ಮಕ್ಕಳ ಜತೆ ಸಮಯ ಕಳೆಯುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News