ಅನರ್ಹ ಶಾಸಕರಿಗೆ ಬಿಜೆಪಿ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ದಿನೇಶ್ ಗುಂಡೂರಾವ್

Update: 2019-09-17 12:56 GMT

ಬೆಂಗಳೂರು, ಸೆ.17: ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ರಾಜರಂತೆ ಇದ್ದರು. ಪಕ್ಷದಲ್ಲಿ ಅವರಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಆದರೆ, ಇವತ್ತು ಅವರ ಪರಿಸ್ಥಿತಿ ಬಿಜೆಪಿಯವರ ಎದುರು ಭಿಕ್ಷೆ ಬೇಡುವಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕೆಪಿಸಿಸಿ ಸೇವಾದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷಕ್ಕೆ ಚೂರಿ ಹಾಕಿ ಹೋಗಿರುವ ಅನರ್ಹ ಶಾಸಕರು ಪಕ್ಷಾಂತರಿಗಳು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿರುವ ಸಂಗತಿ. ಬಿಜೆಪಿಯವರು ನಿಮಗೆ ಕೈ ಕೊಡುತ್ತಾರೆ ಎಂದು ನಾವು ಮೊದಲೇ ಅನರ್ಹ ಶಾಸಕರಿಗೆ ಎಚ್ಚರಿಕೆ ನೀಡಿದ್ದೆವು. ನಮ್ಮ ಮಾತನ್ನು ಅವರು ಕೇಳಿಲ್ಲ. ಇವತ್ತು ಅವರಿಗೆ ಎಂತಹ ಅನ್ಯಾಯವಾಗುತ್ತಿದೆ ಎಂಬುದನ್ನು ನೋಡಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಅನರ್ಹ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ಈಗಾಗಲೇ ಬಹಳ ಸ್ಪಷ್ಟವಾಗಿ ಹೇಳಿದ್ದೇವೆ. ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಅನರ್ಹ ಶಾಸಕರ ಅರ್ಜಿ ವಿಚಾರಣೆ ಮತ್ತೆ ಮುಂದಕ್ಕೆ ಹೋಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನ್ಯಾ.ಮೋಹನ್ ಶಾಂತನಗೌಡರ್ ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದಾರೆ. ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಶಾಸಕರ ವಿಚಾರದಲ್ಲಿ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು. ಬಿಜೆಪಿ ಸರಕಾರದ ಆಡಳಿತವನ್ನು ನೋಡಿದರೆ ಮೈತ್ರಿ ಸರಕಾರ ನೂರು ಪಾಲು ಚೆನ್ನಾಗಿತ್ತು. ಇವತ್ತು ಸರಕಾರ ಸತ್ತು ಬಿದ್ದಿದೆ. ಕೇವಲ ಹಿಂದಿನ ಸರಕಾರದ ಯೋಜನೆಗಳನ್ನ ತನಿಖೆಗೆ ನೀಡುವುದೇ ದೊಡ್ಡ ಕೆಲಸವಾಗಿದೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಸಂಬಂಧ ಸೇವಾದಳದ ಮುಖಂಡರ ಜೊತೆ ಚರ್ಚೆ ಮಾಡಿದ್ದೇವೆ. ರಾಜ್ಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳುತ್ತೇವೆ. ಗಾಂಧೀಜಿಯವರ ಜೀವನ, ಸಿದ್ಧಾಂತಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯತೆ ಎಂಬ ಪದ ಕೇವಲ ರಾಜಕೀಯ ಲಾಭಕ್ಕೆ ಬಳಕೆಯಾಗುತ್ತಿದೆ. ಆದರೆ, ಆದರೆ, ಗಾಂಧೀಜಿಯವರ ರಾಷ್ಟ್ರೀಯತೆ ಕಲ್ಪನೆ ಬಹಳ ಉದಾರವಾದುದು. ಗಾಂಧಿ ಜಯಂತಿ ಕೇವಲ ಪೊರಕೆ ಹಿಡಿದು ಸ್ವಚ್ಛತೆ ಮಾಡುತ್ತಿರುವಂತೆ ಫೋಸ್ ಕೊಡೋಕೆ ಸೀಮಿತವಾಗಿದೆ ಟೀಕಿಸಿದ ಅವರು, ನಾವು ಅಂತಹ ಕೆಲಸವನ್ನು ಮಾಡಲ್ಲ. ಗಾಂಧೀಜಿಯವರ ಆದರ್ಶಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ ಎಂದರು.

ಅಕ್ಟೋಬರ್ 2 ರಿಂದ ಜನವರಿ 31 ಗಾಂಧಿ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ದೇಶಕ್ಕಾಗಿ ತ್ಯಾಗ ಮಾಡಿದವರನ್ನ ನೆನಪಿಸಿಕೊಡುವ ಒಂದು ವಿನೂತನವಾದ ಕಾರ್ಯಕ್ರಮವನ್ನು ಕೆಪಿಸಿಸಿ ವತಿಯಿಂದ ನಡೆಸಿಕೊಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಉಪ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಬೇಕೆಂಬುದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿಲುವು, ಈ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಮಾತನಾಡುವುದಿಲ್ಲ. ಉಪ ಚುನಾವಣೆಯಲ್ಲಿ ನಾವು ಏಕಾಂಗಿಯಾಗಿಯೇ ಹೋರಾಟ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ತಲೆ ತಗ್ಗಿಸುವ ವಿಚಾರ

ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿಗೆ ಪಾವಗಡದ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಿಸಿದ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೊಂದು ತಲೆ ತಗ್ಗಿಸುವ ವಿಚಾರ. ಒಬ್ಬ ಸಂಸದರಿಗೆ ಹೀಗಾದರೆ ಹೇಗೆ. ಈ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು. ನಮ್ಮ ಸಮಾಜದಲ್ಲಿ ಇನ್ನೂ ಸುಧಾರಣೆಯಾಗಬೇಕು, ಕೆಟ್ಟ ಪದ್ಧತಿಗಳನ್ನು ಹೋಗಲಾಡಿಸಬೇಕು. ಇಂತಹ ಘಟನೆಗಳ ಬಗ್ಗೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಒಂದೇ ದಿನದಲ್ಲಿ ಸಮಾಜ ಸುಧಾರಣೆ ಆಗಲ್ಲ, ಸುಧಾರಣೆಗೆ ಸಮಯ ಬೇಕಾಗುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News