ಬಜೆಟ್ ನಂತರದ ತೀವ್ರ ದೈನಂದಿನ ಏರಿಕೆಯನ್ನು ಕಂಡ ಪೆಟ್ರೋಲ್,ಡೀಸೆಲ್ ಬೆಲೆಗಳು

Update: 2019-09-17 15:36 GMT

 ಹೊಸದಿಲ್ಲಿ,ಸೆ.17: ಸೌದಿ ಅರೇಬಿಯಾದ ಕಚ್ಚಾ ತೈಲ ಸ್ಥಾವರಗಳ ಮೇಲೆ ದಾಳಿಗಳ ಬಳಿಕ ಜಾಗತಿಕ ತೈಲ ಬೆಲೆಗಳಲ್ಲಿ ಏರಿಕೆಯ ಕುರಿತು ಭಾರತದ ಕಳವಳಗಳ ನಡುವೆಯೇ ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್‌ನ ದೇಶೀಯ ಬೆಲೆಗಳಲ್ಲಿ ತೀವ್ರ ಹೆಚ್ಚಳವನ್ನು ಮಾಡಲಾಗಿದೆ. ಇದು ಜು.5ರಂದು ಮುಂಗಡಪತ್ರ ಮಂಡನೆಯಾದ ಬಳಿಕ ಇಂಧನಗಳ ದೈನಂದಿನ ಬೆಲೆಗಳಲ್ಲಿ ದಾಖಲೆಯ ಏರಿಕೆಯಾಗಿದೆ. ಮುಂಗಡಪತ್ರದಲ್ಲಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರಿಂದ ಆಗ ಇಂಧನಗಳ ಬೆಲೆ ಪ್ರತಿ ಲೀ.ಗೆ ಸುಮಾರು 2.50 ರೂ.ನಷ್ಟು ಏರಿಕೆಯಾಗಿತ್ತು.

ದಿಲ್ಲಿಯಲ್ಲಿ ಮಂಗಳವಾರ ಪ್ರತಿ ಲೀ.ಪೆಟ್ರೋಲ್ ಬೆಲೆ 14 ಪೈಸೆ ಏರಿಕೆಯಾಗಿ 72.17 ರೂ.ಗೆ ಮತ್ತು ಡೀಸೆಲ್ ಬೆಲೆ 15 ಪೈಸೆ ಏರಿಕೆಯಾಗಿ 65.68 ರೂ.ಗೆ ತಲುಪಿವೆ.

ಮಂಗಳವಾರ ದಿನದ ಮಧ್ಯಂತರ ವಹಿವಾಟಿನಲ್ಲಿ ಜಾಗತಿಕ ಕಚ್ಚಾ ತೈಲಬೆಲೆಗಳು ಸುಮಾರು ಶೇ.20ರಷ್ಟು ಏರಿಕೆಯಾಗಿದ್ದು,ಇದು ಸುಮಾರು 30 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ಜಿಗಿತವಾಗಿತ್ತು. ಬಳಿಕ ಶೇ.15ರಷ್ಟು ಏರಿಕೆಯೊಂದಿಗೆ ಮುಕ್ತಾಯಗೊಂಡಿದ್ದು,ಕಳೆದ ನಾಲ್ಕು ತಿಂಗಳಲ್ಲಿ ಗರಿಷ್ಠ ಮಟ್ಟವನ್ನು ತಲುಪಿವೆ.

ವಿಶ್ವದ ಮೂರನೇ ಬೃಹತ್ ತೈಲ ಬಳಕೆದಾರ ರಾಷ್ಟ್ರವಾಗಿರುವ ಭಾರತವು ಸದ್ಯದ ಬೆಳವಣಿಗೆಗಳ ಮೇಲೆ ನಿಕಟ ನಿಗಾಯಿರಿಸಿದೆ ಎಂದು ತಿಳಿಸಿದ ತೈಲ ಸಚಿವ ಧಮೇಂದ್ರ ಪ್ರಧಾನ್ ಅವರು,ಬೆಲೆಗಳಲ್ಲಿ ಏರಿಕೆಯಾದಾಗ ಅದು ಖಂಡಿತವಾಗಿಯೂ ಆತಂಕವನ್ನು ಸೃಷ್ಟಿಸುತ್ತದೆ. ಶನಿವಾರ ಸೌದಿ ತೈಲ ಸ್ಥಾವರಗಳ ಮೇಲಿನ ದಾಳಿಯ ಬಳಿಕದ ಘಟನಾವಳಿಗಳು ನಮ್ಮಲ್ಲಿ ಕಳವಳವನ್ನು ಮೂಡಿಸಿವೆ ಎಂದರು.

ಆದರೆ ಭಾರತದ ಎರಡನೇ ಬೃಹತ್ ತೈಲಮೂಲವಾಗಿರುವ ಸೌದಿ ಅರೇಬಿಯಾದಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿಲ್ಲ ಎಂದ ಅವರು,ಸೆಪ್ಟೆಂಬರ್ ತಿಂಗಳಿಗೆ ಒಪ್ಪಂದದ ಪ್ರಮಾಣದ ಅರ್ಧಕ್ಕಿಂತ ಹೆಚ್ಚಿನ ತೈಲ ಈಗಾಗಲೇ ನಮ್ಮನ್ನು ತಲುಪಿದೆ. ನಿನ್ನೆ ಮತ್ತು ಇಂದು(ಮಂಗಳವಾರ) ಕೂಡ ನಮ್ಮ ಬಾಬ್ತು ತೈಲವನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.

ಭಾರತಿಯ ತೈಲ ಕಂಪನಿಗಳು ಮತ್ತು ಸರಕಾರ ಸೌದಿಯ ತೈಲ ಕಂಪನಿ ಅರಾಮ್ಕೋ ಮತ್ತು ಅಲ್ಲಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿವೆ. ಭಾರತವು ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದೆ ಎಂದರು.

ಭಾರತವು ತನ್ನ ತೈಲ ಅಗತ್ಯದ ಶೇ.83ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಇರಾಕ್ ನಂತರ ಸೌದಿ ಅರೇಬಿಯಾ ಭಾರತಕ್ಕೆ ಎರಡನೇ ಪ್ರಮುಖ ತೈಲ ಪೂರೈಕೆ ರಾಷ್ಟ್ರವಾಗಿದೆ.

2018-19ನೇ ಸಾಲಿನಲ್ಲಿ ಭಾರತವು 207.3 ಮಿ.ಟನ್ ತೈಲವನ್ನು ಆಮದು ಮಾಡಿಕೊಂಡಿದ್ದು,ಇದರಲ್ಲಿ ಸೌದಿ ಅರೇಬಿಯದ ಪಾಲು 40.33 ಮಿ.ಟನ್ ಆಗಿತ್ತು.

 ಸೌದಿ ಸ್ಥಾವರಗಳ ಮೇಲೆ ಡ್ರೋನ್ ದಾಳಿಯಿಂದಾಗಿ ಪ್ರತಿದಿನ ಐದು ಮಿ.ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆ ನಷ್ಟವಾಗುತ್ತಿದೆ ಎಂದೂ ಪ್ರಧಾನ್ ತಿಳಿಸಿದರು. ಇದು ಸದ್ಯೋಭವಿಷ್ಯದಲ್ಲಿ ತೈಲ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗುವ ನಿರೀಕ್ಷೆಯಿದೆ.

 ಚೀನಾ,ದ.ಕೊರಿಯಾ,ಜಪಾನ್ ಮತ್ತು ಭಾರತ ಸೌದಿ ಅರೇಬಿಯಾದಿಂದ ತೈಲವನ್ನು ಖರೀದಿಸುತ್ತಿರುವ ಪ್ರಮುಖ ರಾಷ್ಟ್ರಗಳಾಗಿವೆ. ಈ ಪೈಕಿ ದಿನವೊಂದಕ್ಕೆ 900ರಿಂದ 1,100 ಕಿಲೊ ಬ್ಯಾರೆಲ್ ತೈಲವನ್ನು ಖರೀದಿಸುತ್ತಿರುವ ಚೀನಾ ಮತ್ತು ಜಪಾನ್ ಮುಂಚೂಣಿಯಲ್ಲಿವೆ. ತೈಲ ಬೆಲೆಗಳು ಏರಿಕೆಯಾದರೆ ಕನಿಷ್ಠ ಮೀಸಲು ಹೊಂದಿರುವ ಭಾರತದ ಮೇಲೆ ಹೆಚ್ಚಿನ ದುಷ್ಪರಿಣಾಮಗಳನ್ನು ಬೀರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News