​ಅನುದಾನಿತ ಶಿಕ್ಷಣ ಸಂಸ್ಥೆಗಳು ಆರ್‌ಟಿಐ ವ್ಯಾಪ್ತಿಗೆ: ಸುಪ್ರೀಂ ಮಹತ್ವದ ತೀರ್ಪು

Update: 2019-09-18 03:46 GMT

ಹೊಸದಿಲ್ಲಿ, ಸೆ.18: ಸರ್ಕಾರಿ ಅನುದಾನಿತ ಶಾಲಾ ಕಾಲೇಜುಗಳು ಮತ್ತು ಲಾಭರಹಿತ ಸಂಸ್ಥೆಗಳು ಕೂಡಾ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ರಿಯಾಯಿತಿ ದರದಲ್ಲಿ ಭೂಮಿ ಮಂಜೂರು ಮಾಡಿಸಿಕೊಂಡಿರುವುದು ಸೇರಿದಂತೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅನುದಾನ ಪಡೆದಿರುವ ಸಂಸ್ಥೆಗಳು, ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ನಾಗರಿಕರಿಗೆ ಅಗತ್ಯ ಮಾಹಿತಿಗಳನ್ನು ನೀಡಲೇಬೇಕು. ಇಂಥ ಸಂಸ್ಥೆಗಳ ಮೇಲೆ ಸಾರ್ವಜನಿಕರಿಗೆ ಅಧಿಕಾರವಿದೆ ಹಾಗೂ ಇವುಗಳ ವ್ಯವಹಾರಗಳಲ್ಲಿ ಪಾರದರ್ಶಕತೆ ಇರಬೇಕು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಗೆ ಈ ವಿಶ್ಲೇಷಣೆ ಅಗತ್ಯ" ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಗುಪ್ತಾ ಮತ್ತು ನ್ಯಾಯಮೂರ್ತಿ ಅನಿರುದ್ಧ್ ಬೋಸ್ ಅವರನ್ನೊಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ. "ಸ್ವಯಂಸೇವಾ ಸಂಸ್ಥೆಗಳು ಅಥವಾ ಇತರ ಸಂಘ ಸಂಸ್ಥೆಗಳು ಸರ್ಕಾರದಿಂದ ಹಣಕಾಸು ನೆರವು ಪಡೆದಿದ್ದರೆ, ಇಂಥ ಸಂಸ್ಥೆಗಳಿಗೆ ನೀಡಿರುವ ನಮ್ಮ ಹಣ ನಿಗದಿತ ಉದ್ದೇಶಕ್ಕೆ ಬಳಕೆಯಾಗಿದೆಯೇ ಅಥವಾ ಇಲ್ಲವೇ ಎನ್ನುವ ಮಾಹಿತಿಯನ್ನು ಸಾರ್ವಜನಿಕರು ಏಕೆ ಕೇಳಬಾರದು" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಡಿಎವಿ ಕಾಲೇಜು ಟ್ರಸ್ಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಈ ತೀರ್ಪು ನೀಡಿದೆ. "ನಮ್ಮದು ಸರ್ಕಾರಿ ಸಂಸ್ಥೆಯಲ್ಲ; ಆದ್ದರಿಂದ ಮಾಹಿತಿಹಕ್ಕು ಕಾಯ್ದೆ ಅನ್ವಯಿಸುವುದಿಲ್ಲ" ಎಂದು ಟ್ರಸ್ಟ್ ವಾದಿಸಿತ್ತು.

"ಈ ಸಂಸ್ಥೆಗಳು ಸಂವಿಧಾನದ ಅಡಿಯಲ್ಲಿ ಅಥವಾ ಸಂಸತ್ತಿನ/ ವಿಧಾನಸಭೆಯ ಕಾಯ್ದೆ ಇಲ್ಲವೇ ಅಧಿಸೂಚನೆ ಅನ್ವಯ ರಚಿತವಾದ ಸಂಸ್ಥೆಗಳಲ್ಲದಿದ್ದರೂ, ಸರ್ಕಾರದ ಮಾಲಕತ್ವದ, ನಿಯಂತ್ರಣದ ಇಲ್ಲವೇ ಹಣಕಾಸು ನೆರವು ಪಡೆದ ಯಾವುದೇ ಸಂಸ್ಥೆಗಳು ಈ ವ್ಯಾಪ್ತಿಯಲ್ಲಿ ಸೇರುತ್ತವೆ" ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News