ನಿಮಗೆ ಯಾವುದೇ ಭಾಷೆಯನ್ನು ಹೇರಲು ಸಾಧ್ಯವಿಲ್ಲ: ಅಮಿತ್ ಶಾ ಹೇಳಿಕೆಗೆ ರಜನಿಕಾಂತ್ ತಿರುಗೇಟು

Update: 2019-09-18 09:44 GMT

ಚೆನ್ನೈ, ಸೆ.18: ನಿಮಗೆ ಯಾವುದೇ ಭಾಷೆಯನ್ನು ಹೇರಲು ಸಾಧ್ಯವಿಲ್ಲ . ಏಕಭಾಷೆ ಪರಿಕಲ್ಪನೆಯಲ್ಲಿ ಹಿಂದಿಯನ್ನು ಹೇರಿಕೆ ಮಾಡುವುದು ಸರಿಯಲ್ಲ ದೇಶದಲ್ಲಿ ಸಾಮಾನ್ಯ ಭಾಷೆಯ ಪರಿಕಲ್ಪನೆಯನ್ನು "ದುರದೃಷ್ಟವಶಾತ್" ಜಾರಿಗೊಳಿಸಲು ಸಾಧ್ಯವಾಗದ ಕಾರಣ ಯಾವುದೇ ಭಾಷೆಯನ್ನು ಹೇರಲು ಸಾಧ್ಯವಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಇಂದು ಹೇಳಿದ್ದಾರೆ. 

ಹಿಂದಿ ಏಕೀಕೃತ ಭಾಷೆಯಾಗುವ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರು ಕಳೆದ ವಾರ ನೀಡಿದ್ದ ಹೇಳಿಕೆ ವಿರುದ್ಧ ರಜನಿಕಾಂತ್ ಧ್ವನಿಗೂಡಿಸಿದರು. "ಸಾಮಾನ್ಯ ಭಾಷೆ ಭಾರತಕ್ಕೆ ಮಾತ್ರವಲ್ಲ, ಯಾವುದೇ ದೇಶದ ಏಕತೆ ಮತ್ತು ಪ್ರಗತಿಗೆ ಒಳ್ಳೆಯದು. ದುರದೃಷ್ಟವಶಾತ್, (ನಮ್ಮಿಂದ) ನಮ್ಮ ದೇಶದಲ್ಲಿ ಒಂದು ಸಾಮಾನ್ಯ ಭಾಷೆಯನ್ನು ತರಲು ಸಾಧ್ಯವಿಲ್ಲ. ಆದ್ದರಿಂದ ಈ ಕಾರಣಕ್ಕಾಗಿ ನೀವು ಯಾವುದೇ ಭಾಷೆಯನ್ನು ಹೇರಲು ಸಾಧ್ಯವಿಲ್ಲ" ಎಂದು ರಜನಿಕಾಂತ್ ವಿಮಾನ ನಿಲ್ದಾಣದಲ್ಲಿ ತಮಿಳಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

"ವಿಶೇಷವಾಗಿ, ನೀವು ಹಿಂದಿ ಹೇರಿದರೆ, ತಮಿಳುನಾಡು ಮಾತ್ರವಲ್ಲ, ದಕ್ಷಿಣದ ಯಾವುದೇ ರಾಜ್ಯಗಳು ಅದನ್ನು ಸ್ವೀಕರಿಸುವುದಿಲ್ಲ. ಉತ್ತರದ ಭಾಗಗಳಲ್ಲಿನ ಅನೇಕ ರಾಜ್ಯಗಳು ಸಹ ಅದನ್ನು ಸ್ವೀಕರಿಸುವುದಿಲ್ಲ" ಎಂದು ಅವರು ಹೇಳಿದರು.

ಹಿಂದಿ ಎಲ್ಲಾ ಭಾರತೀಯರಿಗೂ ಏಕೀಕೃತ ಭಾಷೆಯಾಗಬೇಕೆಂಬ ಅಮಿತ್ ಷಾ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಅವರು ಹಿಂದಿ ಭಾಷೆ ಮಾತನಾಡದ ಜನರಿರುವ ರಾಜ್ಯಗಳ ಮೇಲೆ ಹಿಂದಿ ಹೇರುವ ಪ್ರಯತ್ನ ಕೇಂದ್ರದಿಂದ ಹಿಂದೆ ಹಲವು ಬಾರಿ ನಡೆದಿದೆ. ಶಾ ಅವರು ದಶಕಗಳಷ್ಟು ಹಳೆಯದಾದ ಏಕರೂಪತೆ ಮತ್ತು ವೈವಿಧ್ಯತೆಯ ಚರ್ಚೆಯನ್ನು ಪುನರುಜ್ಜೀವನಗೊಳಿಸಿದ್ದಾರೆ.

ಹಿಂದಿ ಭಾಷೆಯನ್ನು ಸಾಮಾನ್ಯ ಭಾಷೆಯಾಗಿ ವ್ಯಾಪಕವಾಗಿ ಬಳಸಬೇಕೆಂದು ಸೂಚಿಸಿದ ಶಾ ಅವರು, "ಭಾರತವು ವಿವಿಧ ಭಾಷೆಗಳ ದೇಶವಾಗಿದೆ, ಮತ್ತು ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ, ಆದರೆ ಒಂದು ಸಾಮಾನ್ಯ ಭಾಷೆಯನ್ನು ಹೊಂದುವ ಅವಶ್ಯಕತೆಯಿದೆ. ಜಾಗತಿಕವಾಗಿ ಭಾರತದ ಗುರುತಿಸುವ , ಇಂದು ರಾಷ್ಟ್ರವನ್ನು ಒಗ್ಗಟ್ಟಿನಲ್ಲಿ ಒಟ್ಟುಗೂಡಿಸುವ ಸಾಮರ್ಥ್ಯವನ್ನು ಹೊಂದಿರುವ ಒಂದು ಭಾಷೆ ಇದ್ದರೆ ಅದು ಹಿಂದಿ ಭಾಷೆಯಾಗಿದ್ದು, ಇದು ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಮಾತನಾಡುವ ಮತ್ತು ಅರ್ಥವಾಗುವ ಭಾಷೆಯಾಗಿದೆ" ಎಂದು ಟ್ವೀಟ್ ಮಾಡಿದ್ದರು.

ನಟ-ರಾಜಕಾರಣಿ ಕಮಲ್ ಹಾಸನ್ ಕೂಡಾ ಶಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ "ವೈವಿಧ್ಯತೆಯಲ್ಲಿ ಏಕತೆ ಭಾರತವು ಗಣರಾಜ್ಯವಾದಾಗ ನಾವು ನೀಡಿದ ಭರವಸೆಯಾಗಿದೆ. ಈಗ ಯಾವುದೇ ಶಾ, ಸುಲ್ತಾನ್ ಅಥವಾ ಸಾಮ್ರಾಟ್ ಆ ಭರವಸೆಗಳನ್ನು ಹಿಮ್ಮೆಟ್ಟಿಸಬಾರದು" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News