‘ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಿ, ಇಲ್ಲವೇ ರಾಜೀನಾಮೆ ಕೊಡಿ’

Update: 2019-09-18 17:14 GMT

ಬೆಂಗಳೂರು, ಸೆ. 18: ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ಕೊಡಿ, ಇಲ್ಲವೇ ರಾಜೀನಾಮೆ ಕೊಡಿ’ ಎಂದು ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಮೇಲ್ಮನೆ ಸದಸ್ಯರು ಧರಣಿ ಸತ್ಯಾಗ್ರಹ ನಡೆಸಿದರು.

ಬುಧವಾರ ಇಲ್ಲಿನ ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯೆದಲ್ಲಿರುವ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಸಿದ ಕಾಂಗ್ರೆಸ್ ಶಾಸಕರು, ಕೇಂದ್ರ ಹಾಗೂ ರಾಜ್ಯ ಸರಕಾರ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೊಸಳೆ ಕಣ್ಣೀರು: ರೈತರ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುವ ಯಡಿಯೂರಪ್ಪ ನೇತೃತ್ವದ ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಮನೆ ಕಳೆದುಕೊಂಡವರಿಗೆ 10 ಸಾವಿರ ರೂ.ನೀಡಿದ್ದು ಬಿಟ್ಟರೆ ಸಂತ್ರಸ್ತರಿಗೆ ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸುತ್ತೇವೆ ಎಂದಿದ್ದಾರೆ, ಅದನ್ನು ಮಾಡಿಲ್ಲ. ಪುನರ್ವಸತಿ ಕಲ್ಪಿಸುವ ಕೆಲಸವೂ ಆಗಿಲ್ಲ. ಮನೆ-ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಸಂತ್ರಸ್ತರ ಸರ್ವೆ ಕಾರ್ಯವನ್ನೇ ಇನ್ನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಜ್ಯ ಸರಕಾರ ನಿದ್ರಾವಸ್ಥೆಯಲ್ಲಿ ಇದೆ. 1 ತಿಂಗಳ ಕಾಲ ಯಡಿಯೂರಪ್ಪ ಒಬ್ಬರೆ ಇದ್ದರು. ಇದೀಗ ಸಚಿವರಿದ್ದರೂ ಕೆಲಸ ಮಾಡುತ್ತಿಲ್ಲ ಎಂದ ಸಿದ್ದರಾಮಯ್ಯ, ನೆರೆಯಿಂದ 1ಲಕ್ಷ ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ. ಆದರೆ, ಪ್ರಧಾನಿ ಮೋದಿ ರಾಜ್ಯಕ್ಕೆ ಒಂದೇ ಒಂದು ರೂ.ಹಣ ನೀಡಿಲ್ಲ. ಬೆಂಗಳೂರಿಗೆ ಆಗಮಿಸಿದರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ಆರೋಪಿಸಿದರು.

ಜನಪರ ಹೋರಾಟ ಮಾಡುವುದು ನಮ್ಮ ಕೆಲಸ ಎನ್ನುವ ಯಡಿಯೂರಪ್ಪ, ಇನ್ನೂ ಏಕೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಮೂಡಿಗೆರೆ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದರೂ ಸರಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದ ಅವರು, ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಡಾ.ಪರಮೇಶ್ವರ್ ದಿಲ್ಲಿಗೆ ಹೋಗಿದ್ದು, ಏಳೆಂಟು ಶಾಸಕರನ್ನು ಹೊರತುಪಡಿಸಿದರೆ ಎಲ್ಲರೂ ಧರಣಿಯಲ್ಲಿ ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಎಚ್.ಕೆ.ಪಾಟೀಲ್, ರಾಜಶೇಖರ್ ಪಾಟೀಲ್, ರಹೀಂಖಾನ್, ಐವಾನ್ ಡಿಸೋಜಾ, ಸಿ.ಎಂ. ಇಬ್ರಾಹೀಂ, ಲಕ್ಷ್ಮಿಹೆಬ್ಬಾಳ್ಕರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಉಂಟಾಗಿದೆ. ಆದರೆ, ಬಿಜೆಪಿಯವರಿಗೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಸಲು ಭಯ. ಹೀಗಾಗಿ ಅಲ್ಲಿ ಅಧಿವೇಶನ ನಡೆಸಲು ಹಿಂದೇಟು ಹಾಕುತ್ತಿದ್ದಾರೆ. ಈಗಲೂ ಬೆಳಗಾವಿಯಲ್ಲೆ ಅಧಿವೇಶನ ನಡೆಸಬೇಕೆಂಬುದು ನಮ್ಮ ಒತ್ತಾಯ’

-ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯ

ಬೆಳಗಾವಿಗೆ ಹೋಗಲು ಇವರಿಗೆ ಧೈರ್ಯವಿಲ್ಲ. ಹೀಗಾಗಿ ಅಲ್ಲಿ ಅಧಿವೇಶನ ನಡೆಸುತ್ತಿಲ್ಲ. ಅವರೇನು ಮಹಾರಾಜರಲ್ಲ, ಅವರೇಳಿದ್ದೇ ನಡೆಯಬೇಕೆಂದೇನೂ ಇಲ್ಲ. ಬೆಳಗಾವಿಯಲ್ಲೆ ಅಧಿವೇಶನ ನಡೆಸಲು ಆಗ್ರಹಿಸುತ್ತೇವೆ. ನೆರೆ ಪರಿಹಾರಕ್ಕಾಗಿ ದಿಲ್ಲಿ ಮಟ್ಟದಲ್ಲೂ ಹೋರಾಟ ಮಾಡುತ್ತೇವೆ. ಆದರೆ, ನೆರೆ ಸಂತ್ರಸ್ತರಿಗೆ ಸ್ಪಂದಿಸದ ಇಂತಹ ಕ್ರೂರ ಕೇಂದ್ರ ಸರಕಾರವನ್ನು ಎಂದೂ ನೋಡಿಲ್ಲ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News