ಪೆರಿಫೆರಲ್ ಹೊರ ವರ್ತುಲ ರಸ್ತೆ ಕಾಮಗಾರಿ ಚುರುಕುಗೊಳಿಸಲು ಸಂಪುಟ ಸಭೆ ತೀರ್ಮಾನ

Update: 2019-09-18 15:42 GMT

ಬೆಂಗಳೂರು, ಸೆ.18: ರಾಜಧಾನಿ ಬೆಂಗಳೂರಿನಲ್ಲಿ ಪೆರಿಫೆರಲ್ ಹೊರ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಯನ್ನು ಚುರುಕುಗೊಳಿಸಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥನಾರಾಯಣ್ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಪೆರಿಫೆರಲ್ ಹೊರ ವರ್ತುಲ ರಸ್ತೆ ನಿರ್ಮಾಣ ಹಳೆ ಯೋಜನೆ. ಆದರೆ, ಕಾಮಗಾರಿಗಾಗಿ ಭೂ ಸ್ವಾಧೀನ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಸಂಪುಟ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲಾಗಿದೆ ಎಂದು ಅಶ್ವಥನಾರಾಯಣ್ ತಿಳಿಸಿದರು.

ರಾಜ್ಯ ಸರಕಾರವು ಬಿಡಿಎ ಹಾಗೂ ರಾಜ್ಯ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮದ ಮೂಲಕ ಈ ಯೋಜನೆಗಾಗಿ ಸ್ಪೆಷಲ್ ಪರ್ಪಸ್ ವೆಹಿಕಲ್ ಸ್ಥಾಪನೆ ಮಾಡಿದೆ. 65 ಕಿ.ಮೀ.ಉದ್ದವಿರುವ ಈ ರಸ್ತೆಯ ಅಗಲವನ್ನು 75 ಮೀಟರ್‌ಗೆ ನಿಗದಿಗೊಳಿಸಲಾಗಿತ್ತು. ಇದೀಗ ಅದನ್ನು 100 ಮೀಟರ್‌ಗೆ ವಿಸ್ತರಣೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಸ್ತೆ ನಿರ್ಮಾಣ ಕಾಮಗಾರಿಗೆ 8100 ಕೋಟಿ ರೂ., ಭೂ ಸ್ವಾಧೀನ ಪ್ರಕ್ರಿಯೆಗೆ 3850 ಕೋಟಿ ರೂ.ಗಳ ಅಗತ್ಯವಿದೆ. ಹೊಸ ಭೂ ಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡಲಾಗುವುದು. ಎರಡು ಎಕರೆಗಿಂತ ಕಡಿಮೆ ಪ್ರಮಾಣದಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ನಗದು ಪರಿಹಾರ, ಎರಡು ಎಕರೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಶೇ.50ರಷ್ಟು ನಗದು ಹಾಗೂ ಶೇ.50ರಷ್ಟು ಟಿಡಿಆರ್ ನೀಡಲು ಉದ್ದೇಶಿಸಲಾಗಿದೆ ಅಶ್ವಥನಾರಾಯಣ್ ತಿಳಿಸಿದರು.

ಟಿಡಿಆರ್ ನೀಡಲು ಯಾವ ಕಂಪೆನಿಯೂ ಮುಂದೆ ಬರದಿದ್ದರೆ, ಟಿಡಿಆರ್ ಬದಲು ಪೂರ್ಣ ಪ್ರಮಾಣದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಯೋಜನೆಗಾಗಿ ಒಟ್ಟು 1810 ಎಕರೆ 18 ಗುಂಟೆ ಭೂಮಿ ಬೇಕಾಗುತ್ತದೆ. ಭೂ ಸ್ವಾಧೀನಕ್ಕೆ ಒಂದು ವರ್ಷ, ಕಾಮಗಾರಿ ಪೂರ್ಣಗೊಳಿಸಲು 4 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು-ತುಮಕೂರು, ಬೆಂಗಳೂರು-ಬಳ್ಳಾರಿ, ಬೆಂಗಳೂರು-ಹಳೆ ಮದ್ರಾಸು ರಸ್ತೆ, ಬೆಂಗಳೂರು-ಹೊಸೂರು ರಸ್ತೆ ಮೂಲಕ ಪೆರಿಫೆರಲ್ ವರ್ತುಲ ರಸ್ತೆ ಹಾದು ಹೋಗಲಿದೆ. ರಸ್ತೆ ನಿರ್ಮಾಣಕ್ಕೆ ಜೈಕಾದಿಂದ ಸಾಲ ಪಡೆಯಲಾಗುವುದು. ಭೂ ಸ್ವಾಧೀನಕ್ಕೆ ರಾಜ್ಯ ಸರಕಾರವೇ ಹಣ ವಿನಿಯೋಗಿಸಲು ಉದ್ದೇಶಿಸಿದೆ ಎಂದು ಅಶ್ವಥನಾರಾಯಣ್ ತಿಳಿಸಿದರು. ಶೇ.80ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು. ಭೂ ಸ್ವಾಧೀನ ವೇಳೆ ಸರಕಾರಿ ಭೂಮಿ ಅಗತ್ಯವಿದ್ದರೆ ಅದನ್ನು ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು. 

ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯನ್ನು ‘ಮುಖ್ಯಮಂತ್ರಿ ನವ ನಗರೋತ್ಥಾನ’ ಯೋಜನೆ ಎಂದು ಪುನರ್ ನಾಮಕರಣ ಮಾಡಲಾಗಿದೆ. ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದ 8015 ಕೋಟಿ ರೂ.ಗಳ ಕಳೆದ ಕ್ರಿಯಾ ಯೋಜನೆಯನ್ನು ಕೈ ಬಿಡಲಾಗಿದೆ. ಇದೀಗ ಹೊಸದಾಗಿ ಅದಕ್ಕೆ 328 ಕೋಟಿ ರೂ.ಗಳನ್ನು ಸೇರಿಸಲಾಗಿದೆ ಎಂದು ಅವರು ತಿಳಿಸಿದರು. ಐಟಿಪಿಎಲ್ ಸೇರಿದಂತೆ 15 ಪ್ರಮುಖ ರಸ್ತೆಗಳ ಅಭಿವೃದ್ಧಿಗೆ 250 ಕೋಟಿ ರೂ. ನಿಗದಿ ಮಾಡಲಾಗಿದೆ. ತಲಾ ಒಂದು ಕಿ.ಮೀ.ವೈಟ್‌ಟಾಪಿಂಗ್‌ಗೆ 11 ಕೋಟಿ ರೂ.ಖರ್ಚು ಮಾಡಲಾಗುತ್ತಿತ್ತು. ಇದೀಗ ಅದನ್ನೆ 5-6 ಕೋಟಿ ರೂ.ಗಳಲ್ಲಿ ಮಾಡಬಹುದು. ಅದಕ್ಕಾಗಿ 50 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಮೆಕ್ಯಾನಿಕಲ್ ಸ್ವೀಪರ್‌ಗೆ 25 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಅಶ್ವಥನಾರಾಯಣ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News