‘ತೇಜಸ್’ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

Update: 2019-09-19 12:15 GMT

ಬೆಂಗಳೂರು, ಸೆ.19: ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದು ನನ್ನ ಜೀವನದ ಅವಿಸ್ಮರಣೀಯ, ರೋಮಾಂಚನಕಾರಿ ಅನುಭವ. ಪ್ರತಿ ಗಂಟೆಗೆ 1350 ಕಿ.ಮೀ.ವೇಗದಲ್ಲಿ ಸಂಚರಿಸುವ ಈ ವಿಮಾನವನ್ನು ಎರಡು ನಿಮಿಷ ನಾನು ನಿಯಂತ್ರಣದಲ್ಲಿಟ್ಟುಕೊಂಡಿದ್ದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಹೇಳಿದರು.

ಗುರುವಾರ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ತೇಜಸ್ ಲಘು ಯುದ್ಧ ವಿಮಾನದಲ್ಲಿ ಏರೋನಾಟಿಕಲ್ ಡೆವಲಪ್‌ಮೆಂಟ್ ಅಥಾರಿಟಿಯ ರಾಷ್ಟ್ರೀಯ ವಿಮಾನ ಹಾರಾಟ ಪರೀಕ್ಷಾ ವಿಭಾಗದ ನಿರ್ದೇಶಕ ಹಾಗೂ ಏರ್‌ವೈಸ್ ಮಾರ್ಷಲ್ ಎನ್.ತಿವಾರಿ ಜೊತೆ ಸಹ ಪೈಲಟ್ ಆಗಿ 30 ನಿಮಿಷಗಳ ಕಾಲ ಬಾನಂಗಳದಲ್ಲಿ ಯಶಸ್ವಿ ಹಾರಾಟ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ತಮ್ಮ ಸಂತಸವನ್ನು ಹಂಚಿಕೊಂಡರು.

ತೇಜಸ್‌ನಲ್ಲಿ ಹಾರಾಟ ಅತ್ಯಂತ ಹಗುರ ಮತ್ತು ಆರಾಮದಾಯಕವಾಗಿತ್ತು. ಇದು ವಾಯುಪಡೆಗೆ ಸೇರ್ಪಡೆಯಾದ ದಿನದಿಂದಲೂ ಇದರಲ್ಲಿ ಹಾರಾಟ ಮಾಡಬೇಕು ಎಂಬುದು ನನ್ನ ಬಯಕೆಯಾಗಿತ್ತು. ಇಂದು ನನ್ನ ಕನಸು ನನಸಾಗಿದೆ. ಇದಕ್ಕಾಗಿ ನಾನು ಡಿಆರ್‌ಡಿಓ ಹಾಗೂ ಎಚ್‌ಎಎಲ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಾಜನಾಥ್‌ಸಿಂಗ್ ಹೇಳಿದರು.

ತೇಜಸ್ ನಾಲ್ಕನೆ ತಲೆಮಾರಿನ ಲಘು ಯುದ್ಧ ವಿಮಾನ. ನಾವು ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ. ದಕ್ಷಿಣ ಏಷ್ಯಾ ಹಾಗೂ ಇತರ ರಾಷ್ಟ್ರಗಳಿಗೆ ತೇಜಸ್ ಲಘು ಯುದ್ಧ ವಿಮಾನಗಳನ್ನು ರಫ್ತು ಮಾಡಲು ನಾವು ಸಮರ್ಥರಿದ್ದೇವೆ ಎಂದು ಅವರು ಹೇಳಿದರು.

ತೇಜಸ್‌ನಲ್ಲಿ ಹಾರಾಟ ಮಾಡುವ ಮುನ್ನ ವಾಯುಪಡೆಯ ಹಿರಿಯ ಅಧಿಕಾರಿಗಳು ತೇಜಸ್ ನಡೆಸುವ ಕಾರ್ಯಾಚರಣೆ ಮತ್ತು ಅದರ ವೈಶಿಷ್ಯತೆಗಳ ಬಗ್ಗೆ ರಾಜನಾಥ್‌ಸಿಂಗ್‌ಗೆ ವಿವರಣೆ ನೀಡಿದರು.

ಮೊದಲ ರಕ್ಷಣಾ ಸಚಿವ: ಪೈಲಟ್ ಸಮವಸ್ತ್ರ ಧರಿಸಿದ್ದ ರಾಜನಾಥ್‌ಸಿಂಗ್ ನೋಡಲು ಹಿರಿಯ ಯುದ್ಧ ವಿಮಾನಗಳ ಪೈಲಟ್‌ನಂತೆಯೇ ಕಂಡು ಬಂದರು. ತೇಜಸ್ ಲಘು ಯುದ್ಧ ವಿಮಾನದಲ್ಲಿ ಹಾರಾಡಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ರಾಜನಾಥ್‌ ಸಿಂಗ್ ಪಾತ್ರರಾದರು.

ಸ್ವದೇಶಿ ತೇಜಸ್: ವಾಯುಪಡೆಗೆ ಸೇರ್ಪಡೆಯಾಗಿರುವ ತೇಜಸ್ ಲಘು ಯುದ್ಧ ವಿಮಾನವನ್ನು ಬೆಂಗಳೂರಿನ ಎಚ್‌ಎಎಲ್‌ನಲ್ಲಿ ನಿರ್ಮಿಸಲಾಗಿದೆ. 13 ಟನ್ ತೂಕದ ಈ ಅತ್ಯಾಧುನಿಕ ನಾಲ್ಕನೆ ತಲೆಮಾರಿನ ಯುದ್ಧ ವಿಮಾನವು ಮೂರು ಟನ್ ತೂಕದ ಶಸ್ತ್ರಾಸ್ತ್ರ ಹಾಗೂ ಬಾಂಬುಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಪ್ರತಿ ಗಂಟೆಗೆ 1,350 ಕಿ.ಮೀ ವೇಗದಲ್ಲಿ ಚಲಿಸುವ ತೇಜಸ್, 500 ಬಾಂಬ್‌ಗಳನ್ನು ವೈರಿ ನೆಲೆಗಳ ಮೇಲೆ ಉಡಾಯಿಸುವ ಶಕ್ತಿ ಹೊಂದಿದೆ. ಈ ವಿಮಾನದಲ್ಲಿರುವ 73 ಕ್ಷಿಪಣಿಗಳು ಅಲ್ಪಅಂತರದ ಗುರಿಯನ್ನು ನಿಖರವಾಗಿ ತಲುಪಬಲ್ಲವು ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ವಿವರಿಸಿದರು.

ವಿಮಾನದಲ್ಲಿ ಅಳವಡಿಸಿರುವ ಮೆಷಿನ್ ಗನ್‌ಗಳು ಏಕ ಕಾಲದಲ್ಲಿ ನಿರಂತರವಾಗಿ ಗುಂಡುಗಳನ್ನು ಹೊರ ಹೊಮ್ಮಿಸುವ ವ್ಯವಸ್ಥೆ ಹೊಂದಿದೆ. ಗುಂಡು ನಿರೋಧಕ ಗಾಜಿನೊಂದಿಗೆ ವಿಶೇಷ ಕಾಂಪಿಟ್‌ನಲ್ಲಿ ಇಬ್ಬರು ಪೈಲಟ್‌ಗಳು ನಿಯೋಜಿತ ಕಾರ್ಯಾಚರಣೆ ನಡೆಸಲು ಅಗತ್ಯವಾದ ಎಲ್ಲ ಅತ್ಯಾಧುನಿಕ ಮಾರ್ಗದರ್ಶಿ ತಂತ್ರಜ್ಞಾನ ಇದರಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News