ನೂತನ ಕೈಗಾರಿಕಾ ನೀತಿಯಲ್ಲಿ ದಲಿತ ಉದ್ದಿಮೆಗಳಿಗೆ ಪ್ರೋತ್ಸಾಹ: ಬಿ.ಎಸ್.ಯಡಿಯೂರಪ್ಪ

Update: 2019-09-19 11:42 GMT

ಬೆಂಗಳೂರು, ಸೆ.19: ರಾಜ್ಯ ಸರಕಾರ 2019 -20ನೇ ಸಾಲಿನಲ್ಲಿ ಅನುಷ್ಠಾನಕ್ಕೆ ತರಲಿರುವ ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಹೆಚ್ಚು ರಿಯಾಯಿತಿ ನೀಡುವ ಮೂಲಕ ದಲಿತ ಸಮುದಾಯವನ್ನು ಉದ್ಯಮಶೀಲರನ್ನಾಗಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ರಾಜ್ಯ ಎಸ್ಸಿ, ಎಸ್ಟಿ ಉದ್ಯಮದಾರರ ಕೈಗಾರಿಕೆಗಳ ಸಂಘ (ದಲಿತ ಉದ್ದಿಮೆದಾರರ ಸಂಘ) ಏರ್ಪಡಿಸಿದ್ದ ಸರಕಾರದ ಸವಲತ್ತುಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಶೆಡ್, ಫ್ಲಾಟ್ ಮತ್ತು ಮಳಿಗೆಗಳ ಖರೀದಿಗೆ ನೀಡುವ ಸಬ್ಸಿಡಿಯನ್ನು ಶೇ.50 ರಿಂದ ಶೇ.75ಕ್ಕೆ ಹೆಚ್ಚಿಸುವ ಬಗೆಗಿನ ಪ್ರಕ್ರಿಯೆಗಳು ಚರ್ಚೆಯ ಹಂತದಲ್ಲಿದೆ ಎಂದು ತಿಳಿಸಿದರು.

ನೂತನವಾಗಿ ಜಾರಿ ಮಾಡಲಿರುವ ಕೈಗಾರಿಕಾ ನೀತಿಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೈಗಾರಿಕಾ ನೀತಿಯನ್ನು ಜಾರಿ ಮಾಡಲಾಗುತ್ತಿದೆ. ಸಮಗ್ರ ಕೈಗಾರಿಕಾ ಅಭಿವೃದ್ಧಿ ಮತ್ತು ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು ಇದರ ಮೂಲ ಉದ್ದೇಶವೆಂದು ಅವರು ಹೇಳಿದರು.

ಎಸ್ಸಿ-ಎಸ್ಟಿ ಸಮುದಾಯ ಸ್ವಾವಲಂಬಿಗಳಾಗಿ ಉದ್ಯಮ ನಡೆಸಲು ಯಾವ, ಯಾವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂಬುದನ್ನು ನಾನು ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಜೊತೆ ಚರ್ಚಿಸಿ, ಅನುಷ್ಠಾನಗೊಳಿಸಲಾಗುವುದು. ಒಟ್ಟಾರೆ ರಾಜ್ಯದಲ್ಲಿ ದಲಿತರು ಸೇರಿದಂತೆ ಎಲ್ಲ ಸಮುದಾಯಗಳು ನೆಮ್ಮದಿಯಿಂದ ಕೆಲಸ ಮಾಡುವಂತಹ ವಾತಾವರಣ ನಿರ್ಮಿಸುವುದು ಸರಕಾರದ ಜವಾಬ್ದಾರಿಯೆಂದು ಅವರು ಹೇಳಿದರು.

ಕೆಎಸ್‌ಎಫ್‌ಸಿ ಹಣಕಾಸು ಸಂಸ್ಥೆಯಿಂದ ಸಾಲ ನೀಡುವಾಗ ನಿವೇಶನವನ್ನೇ ಭದ್ರತೆಯನ್ನಾಗಿ ಇಟ್ಟುಕೊಂಡು ಸಾಲ ವಿತರಿಸಬೇಕೆಂದು ಸಂಸ್ಥೆಯ ಹಣಕಾಸು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಎಸ್ಸಿಪಿ ಮತ್ತು ಟಿಎಸ್ಪಿ ಹಣವನ್ನು ಸಮರ್ಥವಾಗಿ ಬಳಸಿಕೊಳ್ಳಲು 30,447 ಕೋಟಿ ರೂ. ಹಣಕ್ಕೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್ಸಿ, ಎಸ್ಟಿ ಜನಾಂಗದ ಉದ್ದಿಮೆದಾರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಬಿಜೆಪಿ ಸರಕಾರವು ಈ ಜನಾಂಗದ ಬೇಡಿಕೆಗಳನ್ನು ಈಡೇರಿಸಲು ಪ್ರತಿಪಕ್ಷದವನಾಗಿ ನಿಮಗೆ ದನಿಗೂಡಿಸುವುದಾಗಿ ತಿಳಿಸಿದರು.

ಎಸ್ಸಿ, ಎಸ್ಟಿ ಜನಾಂಗದ ಗುತ್ತಿಗೆದಾರರಿಗೆ 50 ಲಕ್ಷ ರೂ. ವರೆಗಿನ ಮೀಸಲಾತಿ ಪ್ರಮಾಣವನ್ನು ಒಂದು ಕೋಟಿ ರೂ.ವರೆಗೆ ಹೆಚ್ಚಿಸಬೇಕು. ಕೆಎಸ್‌ಎಫ್‌ಸಿ ಹಣಕಾಸು ಸಂಸ್ಥೆ ಜೊತೆಗೆ, ರಾಷ್ಟ್ರೀಕೃತ ಬ್ಯಾಂಕ್‌ಗಳೂ 10 ಕೋಟಿ ರೂ. ವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಸಂಸದ ಎಲ್.ಹನುಮಂತಯ್ಯ ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯದ ಉದ್ದಿಮಿಗಳು ಸರಕಾರದ ಯೋಜನೆಯಡಿ ಬ್ಯಾಂಕ್‌ಗಳಿಂದ ಸುಮಾರು 600 ಮಂದಿ ಸಾಲ ಪಡೆದಿದ್ದಾರೆ. ಇದರಲ್ಲಿ ಸುಮಾರು 599 ಮಂದಿ ಪ್ರಾಮಾಣಿಕವಾಗಿ ಸಾಲ ಮರು ಪಾವತಿ ಮಾಡುತ್ತಿದ್ದಾರೆ. ಹೀಗಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸುಮಾರು 10 ಕೋಟಿ ರೂ.ವರೆಗೂ ಬಡ್ಡಿರಹಿತ ಸಾಲ ನೀಡಬೇಕೆಂದು ತಿಳಿಸಿದರು.

ಮೇಲ್‌ಜಾತಿಯ ಉದ್ದಿಮೆಗಳಿಗೆ ರಾಜ್ಯ ಸರಕಾರ ನೂರಾರು ಎಕರೆ ನೀಡುತ್ತಿದೆ. ಆದರೆ, ದಲಿತರಿಗೆ ಮಾತ್ರ ಒಂದು ಎಕರೆ, ಅರ್ಧ ಎಕರೆ ನೀಡುತ್ತದೆ. ಆದರೆ, ಈ ಜಮೀನನ್ನು ಒಳ್ಳೆಯ ಪ್ರದೇಶದಲ್ಲಿ ನೀಡಬೇಕು. ಹಾಗೂ ಅಬಕಾರಿ ಇಲಾಖೆಯಲ್ಲೂ ದಲಿತರಿಗೆ ಮೀಸಲಾತಿ ಕಲ್ಪಿಸಬೇಕೆಂದು ಅವರು ಹೇಳಿದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಶಾಸಕರಾದ ಎಚ್.ಕೆ. ಕುಮಾರಸ್ವಾಮಿ, ಎನ್.ಮಹೇಶ್, ಮಾಜಿ ಶಾಸಕ ಡಿ.ಎಸ್. ವೀರಯ್ಯ ಸೇರಿದಂತೆ, ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್ ಪ್ರಸ್ತಾವಿಕ ಭಾಷಣ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News