ಪ್ರಧಾನಿ ಮೋದಿಯ ‘ಏಕಕಾಲದಲ್ಲಿ ಚುನಾವಣೆ’ ಪ್ರಸ್ತಾವ ವಿರೋಧಿಸಿದ್ದ ಅರುಣ್ ಜೇಟ್ಲಿ: ಆರ್ ಟಿಐಯಿಂದ ಬಹಿರಂಗ

Update: 2019-09-19 10:26 GMT

ಹೊಸದಿಲ್ಲಿ, ಸೆ.19: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವವನ್ನು ಪಕ್ಷದ ವೇದಿಕೆಯಲ್ಲಿ ಪ್ರಧಾನಿ ಮೋದಿ ಮೊದಲ ಬಾರಿಗೆ ಮಾರ್ಚ್ 19,2016ರಂದು ಮುಂದಿಟ್ಟ ಕೆಲವೇ ವಾರಗಳಲ್ಲಿ ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿ ಇಂತಹ ಒಂದು ಪರಿಕಲ್ಪನೆಯಲ್ಲಿ ಹಲವಾರು ಸಮಸ್ಯೆಗಳು ಹಾಗೂ ಅಡೆತಡೆಗಳಿವೆ ಎಂದು ಎಚ್ಚರಿಸಿದ್ದರೆಂದು ಸಚಿವರ ಸಮಿತಿ ಸಭೆಯ ನಡಾವಳಿಗಳಲ್ಲಿ ದಾಖಲಾಗಿರುವುದು ‘ಇಂಡಿಯನ್ ಎಕ್ಸ್‍ಪ್ರೆಸ್’ ಪತ್ರಿಕೆ ಆರ್‍ಟಿಐ ಅರ್ಜಿ ಮೂಲಕ ಪಡೆದ ಮಾಹಿತಿಯಿಂದ ತಿಳಿದು ಬಂದಿದೆ.

ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪವನ್ನು ಮೋದಿ ಆಗಾಗ ಮುಂದಿಡುತ್ತಲೇ ಇದ್ದು, ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲೂ ಅವರು ಈ ಬಗ್ಗೆ ಹೇಳಿಕೊಂಡಿದ್ದರು. ಇಂತಹ ಒಂದು ಕ್ರಮದಿಂದ  ಚುನಾವಣಾ ವೆಚ್ಚವೂ ಕಡಿಮೆಯಾಗಲಿದೆ ಎಂಬುದು ಅವರ ವಾದ.

2019ರ ಚುನಾವಣೆಗಾಗಿ ಇವಿಎಂ ಹಾಗೂ ವಿವಿಪ್ಯಾಟ್  ಖರೀದಿಸಲು 5,200 ಕೋಟಿ ರೂ. ಪ್ರಸ್ತಾವವನ್ನು 2016ರ ಆರಂಭದಲ್ಲಿ   ಚುನಾವಣಾ ಆಯೋಗ ಮುಂದಿಟ್ಟಾಗ ಈ ಪ್ರಸ್ತಾವನೆಯನ್ನು ಪರಿಶೀಲಿಸಲು ರಚಿಸಲಾದ ಸಚಿವರ ಸಮಿತಿಗೆ  ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯನ್ನೂಪರಿಶೀಲಿಸಲು ಹೇಳಲಾಗಿತ್ತು.

ಎಪ್ರಿಲ್ 11, 2016ರಂದು ಈ ಸಮಿತಿ ಸಭೆ ಸೇರಿದಾಗ ಜೇಟ್ಲಿ ಇಂತಹ ಒಂದು ಪದ್ಧತಿಯ ಕುರಿತಂತೆ ಎಚ್ಚರಿಕೆಯಿಂದ ಮುಂದಡಿಯಿಡುವಂತೆ ಹಾಗೂ ಅದರಲ್ಲಿ ಹಲವು ಸಮಸ್ಯೆಗಳಿವೆ ಎಂದು ಹೇಳಿದ್ದರು.

ಕೊನೆಗೆ ಆಗಿನ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಈ ವಿಚಾರವನ್ನು ತಜ್ಞ ಸಮಿತಿಗೆ ವಹಿಸಬೇಕೆಂದು  ತೀರ್ಮಾನಿಸಿತ್ತು.

ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪಕ್ಕೆ ಇಲ್ಲಿಯ ತನಕ ವಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಿಪಿಐ, ಎಐಎಂಐಎಂ ಹಾಗೂ ಎನ್‍ ಸಿಪಿ ವಿರೋಧಿಸಿದ್ದರೂ ಬಿಜೆಪಿಯ ಯಾರೊಬ್ಬರೂ ವಿರೋಧಿಸಿಲ್ಲ ಎಂದೇ ತಿಳಿಯಲಾಗಿರುವಾಗ ಜೇಟ್ಲಿ ಅವರು ನೀಡಿದ್ದ ಈ ಪ್ರತಿಕ್ರಿಯೆ ಬಹಳ ಮಹತ್ವ ಪಡೆದಿದೆ.

ಆದರೆ ಮಾರ್ಚ್ 2017ರಲ್ಲಿ ರಾಜಧಾನಿಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಜೇಟ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಪರ ಮಾತನಾಡಿದ್ದರಲ್ಲದೆ, ಈ ರೀತಿ ಮಾಡಿದರೆ ಚುನಾವಣಾ ಖರ್ಚು ಕೂಡ ಸಾಕಷ್ಟು ಕಡಿಮೆಯಾಗಲಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News