ಹೊಸ ಐಟಿ-ಬಿಟಿ ನೀತಿ ಶೀಘ್ರ ಜಾರಿ: ಸಿಎಂ ಯಡಿಯೂರಪ್ಪ

Update: 2019-09-19 12:09 GMT

ಬೆಂಗಳೂರು, ಸೆ.19: ಕರ್ನಾಟಕದ ಮಾಹಿತಿ-ತಂತ್ರಜ್ಞಾನ ಕ್ಷೇತ್ರಕ್ಕೆ ಹೊಸ ನೀತಿ ರೂಪಿಸುತ್ತಿದ್ದು, ಶೀಘ್ರದಲ್ಲಿಯೇ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಗುರುವಾರ ನಗರದ ರೇಸ್‌ಕೋರ್ಸ್ ರಸ್ತೆಯ ಖಾಸಗಿ ಹೊಟೇಲ್‌ನಲ್ಲಿ ಐಟಿ ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೃಹತ್ ಬಂಡವಾಳ ಆಕರ್ಷಿಸುವ ಮತ್ತು ಹೆಚ್ಚು ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಪರಿಷ್ಕತ ನೂತನ ಮಾಹಿತಿ-ತಂತ್ರಜ್ಞ್ಞಾನ ನೀತಿ ಸದ್ಯದಲ್ಲೇ ಬರಲಿದೆ ಎಂದರು.

ರಾಜ್ಯ ಸರಕಾರ ಕ್ಷಿಪ್ರ, ತ್ವರಿತ ಮತ್ತು ಸಮಗ್ರ ಕೈಗಾರಿಕಾ ಅಭಿವೃದ್ಧಿಯ ಗುರಿಯನ್ನು ಹೊಂದಿದ್ದು, ಈ ಗುರಿ ಸಾಧನೆಗೆ ಐಟಿ ವಲಯದ ಮಹತ್ವವನ್ನು ಗುರುತಿಸಿದ್ದೇವೆ. ಹಾಗಾಗಿ ಗುರಿ ಸಾಧನೆಗಾಗಿ ಹೊಸ ಪರಿಷ್ಕತ ಐಟಿ ನೀತಿಯನ್ನು ಮುಂದಿನ ದಿನಗಳಲ್ಲಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇತ್ತೀಚಿನ ತಂತ್ರಜ್ಞಾನಗಳಿಗೆ ಬೆಂಬಲ ಮತ್ತು ಉತ್ತೇಜನ ನೀಡಲು ತಮ್ಮ ಅಧ್ಯಕ್ಷತೆಯಲ್ಲಿ ಕರ್ನಾಟಕ ಆವಿಷ್ಕಾರ ಪ್ರಾಧಿಕಾರವನ್ನು ರಚಿಸುವುದಾಗಿ ಹೇಳಿದ ಅವರು, ಈ ಪ್ರಾಧಿಕಾರಕ್ಕೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಸಹ ಅಧ್ಯಕ್ಷರಾಗಿರುತ್ತಾರೆ ಎಂದು ಪ್ರಟಿಸಿದರು.

ನವೋದ್ಯಮಗಳಿಗೆ ಹೆಚ್ಚು ಉತ್ತೇಜನ ನೀಡಲು ನವೋದ್ಯಮ ವಿಷನ್ ಗ್ರೂಪ್ ಸ್ಥಾಪಿಸುವ ಚಿಂತನೆ ಇದ್ದು, ಇದರಿಂದ ನವೋದ್ಯಮಗಳ ಬೆಳವಣಿಗೆಗೆ ಅಗತ್ಯವಾದ ಪೂರಕ ವಾತಾವರಣ ಸೃಷ್ಟಿಸಿ ಉದ್ಯಮಗಳನ್ನು ಬಳಸಿಕೊಂಡು ನವೋದ್ಯಮಗಳನ್ನು ಬಲಪಡಿಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

ನೆರವು: ರಾಜ್ಯದಲ್ಲಿ ನೆರೆ ಸಂತ್ರಸ್ತರು ಪರಿತಪಿಸುತ್ತಿದ್ದಾರೆ. ಈಗಾಗಲೇ 87 ಜನ ಮೃತಪಟ್ಟಿದ್ದಾರೆ. 1.50 ಲಕ್ಷ ಮನೆಗಳು ನಾಶವಾಗಿದ್ದು, 2.47 ಲಕ್ಷಗಳು ಮನೆ ಹಾನಿಗೊಂಡಿವೆ. 15,119 ಕೋಟಿ ಬೆಳ ನಾಶವಾಗಿದೆ. ಒಟ್ಟಾರೆ 38,451 ಕೋಟಿ ನಷ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ಐಟಿ-ಬಿಟಿ ಕ್ಷೇತ್ರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಸೇರಿದಂತೆ ಐಟಿ-ಬಿಟಿ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News