ವಿಶ್ವವಿದ್ಯಾಲಯಗಳಲ್ಲಿ ಜಾತಿ ತಾರತಮ್ಯ: ಕೇಂದ್ರ, ಯುಜಿಸಿಗೆ ಸುಪ್ರೀಂಕೋರ್ಟ್ ನೋಟಿಸ್

Update: 2019-09-20 06:49 GMT

ಹೊಸದಿಲ್ಲಿ, ಸೆ.20: ಡಾ.ಪಾಯಲ್ ತಾಡ್ವಿ ಹಾಗೂ ರೋಹಿತ್ ವೇಮುಲಾ ಸಹಿತ ಹಲವರ ಆತ್ಮಹತ್ಯೆಗೆ ಕಾರಣವಾಗಿರುವ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಆಳವಾಗಿ ಬೇರುಬಿಟ್ಟಿರುವ ಜಾತಿ ತಾರತಮ್ಯದ ವಿಚಾರವನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಶುಕ್ರವಾರ ಒಪ್ಪಿಕೊಂಡಿದೆ.
ಡಾ.ಪಾಯಲ್ ಹಾಗೂ ರೋಹಿತ್ ಅವರ ತಾಯಿ ಜಂಟಿಯಾಗಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ, ಕೇಂದ್ರ ಸರಕಾರ, ಯುಜಿಸಿ ಹಾಗೂ ನ್ಯಾಕ್‌ಗೆ ನೋಟಿಸ್ ನೀಡಿ, ಅರ್ಜಿದಾರರಿಗೆ ಉತ್ತರಿಸುವಂತೆ ಸೂಚಿಸಿದೆ.
ಇಬ್ಬರು ತಾಯಂದಿರನ್ನು ಪ್ರತಿನಿಧಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಯುಜಿಸಿ, ನಿಯಮಗಳನ್ನು ರೂಪಿಸಿದ್ದರೂ,ಅನುಷ್ಠಾನವಾಗುತ್ತಿಲ್ಲ ಎಂದು ಬೆಟ್ಟು ಮಾಡಿದರು.
‘‘ಕೆಲವು ಡೀಮ್ಡ್ ವಿವಿಗಳಲ್ಲದೆ 228 ವಿವಿಗಳಿವೆ. ಇಲ್ಲಿ ಯಾವುದೇ ತನಿಖಾ ಆಯೋಗವನ್ನು ರಚಿಸಲಾಗಿಲ್ಲ’’ ಎಂದು ದೂರಿದ ಇಂದಿರಾ ಜೈಸಿಂಗ್, ಜಸ್ಟಿಸ್ ರಮಣ ಅವರ ಹಿಂದಿನ ತೀರ್ಪನ್ನು ಉಲ್ಲೇಖಿಸಿದರು. ಆ ತೀರ್ಪಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧರಿತ ತಾರತಮ್ಯವನ್ನು ಬಿಂಬಿಸಲಾಗಿತ್ತು.
ಈ ಹಿಂದಿನ ತೀರ್ಪಿನಲ್ಲಿ ನೀಡಿರುವ ನಿರ್ದೇಶನವನ್ನು ಅನುಷ್ಠಾನಕ್ಕೆ ತರಲಾಗಿಲ್ಲ ಎಂದು ಹೇಳಿದ ಹಿರಿಯ ವಕೀಲೆ, ಅಂತಹ ಕಿರುಕುಳವನ್ನು ತಡೆಯಲು ಕಟ್ಟುನಿಟ್ಟಿನ ಅನುಸರಣೆ ಖಚಿತಪಡಿಸಲು ಉಚ್ಚ ನ್ಯಾಯಾಲಯ ಹೆಜ್ಜೆ ಇಡಬೇಕೆಂದು ಆಗ್ರಹಿಸಿದರು.
ಅನುಷ್ಠಾನ ಹಾಗೂ ಅನುಸರಣೆಯ ವಿಚಾರವನ್ನು ಪರಿಶೀಲಿಸಲು ಒಪ್ಪಿಕೊಂಡಿರುವ ನ್ಯಾಯಪೀಠ, ನಾಲ್ಕು ವಾರಗಳಲ್ಲಿ ಜವಾಬ್ದಾರಿಯುತ ಸಂಸ್ಥೆಗಳಿಂದ ಪ್ರತಿಕ್ರಿಯೆಯನ್ನು ಕೋರಿದೆ.
ಜಾತಿ ಆಧರಿತ ತಾರತಮ್ಯ ಹಾಗೂ ಕಿರುಕುಳದ ಕಾರಣ ನೀಡಿ ಡಾ.ಪಾಯಲ್ ಹಾಗೂ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಪಾಯಲ್ ತನಗೆ ಕಿರುಕುಳ ನೀಡಿದ್ದ ಮೂವರು ವೈದ್ಯರ ಹೆಸರನ್ನು ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದರು. ತನ್ನನ್ನು ಕಾಲೇಜಿನಿಂದ ಹೊರಹಾಕಿದ್ದರಿಂದ ನೊಂದುಕೊಂಡಿದ್ದ ರೋಹಿತ್ 2016ರಲ್ಲಿ ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News