''ಯಡಿಯೂರಪ್ಪರೇ ನಿಮಗೆ ದ್ವೇಷವಿರುವುದು ನನ್ನ ಮೇಲಲ್ಲವೇ... ಬಡವರ ಮೇಲೆ ಏಕೆ ನಿಮ್ಮ ಕೋಪ?''

Update: 2019-09-20 11:24 GMT

ಬೆಂಗಳೂರು, ಸೆ.20: ಬಡವರ ಬಂಧು ಕಿರುಸಾಲ ಯೋಜನೆಯ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಮಾಧ್ಯಮ ವರದಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಡವರ ಬಂಧು ಯೋಜನೆಗೆ ಚೈತನ್ಯ ನೀಡದಿದ್ದಲ್ಲಿ ಹೋರಾಟ ನಡೆಸುವುದಾಗಿ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

''ನಿಮಗೆ ದ್ವೇಷ ಇದ್ದದ್ದು ನನ್ನ ಮೇಲಲ್ಲವೇ ಯಡಿಯೂರಪ್ಪನವರೇ? ಆದರೆ ಬಡವರ ಮೇಲೇಕೆ ನಿಮ್ಮ ಕೋಪ? ಸೇಡಿನ ರಾಜಕೀಯ ಮಾಡುವುದಿಲ್ಲ ಎಂದು ಸದನದಲ್ಲಿ ಹೇಳಿದ್ದ ನೀವು ಅಧಿಕಾರ ವಹಿಸಿಕೊಂಡ ನಂತರ ನನ್ನ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ಮಾಡಿದ್ದೆಲ್ಲವೂ ಸೇಡಿನ ಕ್ರಮ. 'ಬಡವರ ಬಂಧು' ಯೋಜನೆಯನ್ನು ನಿರ್ಲಕ್ಷಿಸಿ ನೀವು ಬಡವರ ವಿರೋಧಿಯಾಗಿದ್ದೀರಿ'' 

''ಆರ್ಥಿಕವಾಗಿ ಅಶಕ್ತರಾದವರು, ಸಣ್ಣ ವ್ಯಾಪಾರಿಗಳನ್ನು ಲೇವಾದೇವಿದಾರರ ವಿಷವರ್ತುಲದಿಂದ ಪಾರು ಮಾಡುವ ಸದುದ್ದೇಶದಿಂದ ಬಡವರ ಬಂಧು ಕಾರ್ಯಕ್ರಮವನ್ನು ಜಾರಿಗೆ ತರಲಾಗಿತ್ತು. ಅಶಕ್ತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ಈ ಯೋಜನೆಯನ್ನು ಕೊಲ್ಲುತ್ತಿರುವ ನೀವು ಬಡವರ ಸ್ವಾಭಿಮಾನವನ್ನು ಕೆಣಕಿದ್ದೀರಿ ಯಡಿಯೂರಪ್ಪನವರೇ..''

''ಬಡವರ ಬಂಧು ಯೋಜನೆ ವಿಫಲವಾಗಬಾರದು. ಇದರಲ್ಲಿ ಜಾತಿ, ಧರ್ಮ, ಪಕ್ಷಗಳಿಲ್ಲ. ಅಶಕ್ತರನ್ನು ಸಬಲರನ್ನಾಗಿಸಿ ದೇಶದ ಅಭಿವೃದ್ಧಿಯಲ್ಲಿ ಅವರನ್ನೂ ಒಳಗೊಳ್ಳುವಂತೆ ಮಾಡುವ ಪ್ರಮುಖ ಅರ್ಥಿಕ ಚಟುವಟಿಕೆ‌. ಈ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರು ಚೈತನ್ಯ ತುಂಬಬೇಕು. ಇಲ್ಲವೇ, ಹೋರಾಟ ಎದುರಿಸಬೇಕು.'' ಎಂದವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News