​ಕಾರ್ಪೋರೇಟ್ ತೆರಿಗೆ ದರ ಶೇ.22ಕ್ಕೆ ಇಳಿಕೆ: ನಿರ್ಮಲಾ ಸೀತಾರಾಮನ್ ಘೋಷಣೆ

Update: 2019-09-20 15:35 GMT

 ಹೊಸದಿಲ್ಲಿ, ಸೆ.20: ಆರ್ಥಿಕ ಹಿಂಜರಿಕೆ ತಡೆದು ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ದೇಶೀಯ ಸಂಸ್ಥೆಗಳ ಕಾರ್ಪೊರೇಟ್ ತೆರಿಗೆ ದರವನ್ನು ಇಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದರಿಂದ ಸರಕಾರಕ್ಕೆ ವಾರ್ಷಿಕ 1.45 ಲಕ್ಷ ಕೋಟಿ ಆದಾಯ ನಷ್ಟವಾಗಲಿದೆ ಎಂದು ಸರಕಾರ ತಿಳಿಸಿದೆ.

ದೇಶೀಯ ಕಂಪೆನಿಗಳಿಗೆ ಕಾರ್ಪೊರೇಟ್ ತೆರಿಗೆ ದರವನ್ನು ಶೇ.35ರಿಂದ ಶೇ.25.2ಕ್ಕೆ ಇಳಿಸಲು ಹಾಗೂ ಅಕ್ಟೋಬರ್ 1ರ ಬಳಿಕ ಅಸ್ತಿತ್ವಕ್ಕೆ ಬಂದಿರುವ ಉತ್ಪಾದನಾ ಸಂಸ್ಥೆಗಳಿಗೆ ಶೇ.15ರ ಹೊಸ ತೆರಿಗೆ ದರ ನಿಗದಿಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಸರಕಾರ ಈ ನಿರ್ಧಾರ ಪ್ರಕಟಿಸುತ್ತಿರುವಂತೆಯೇ ಶೇರುಮಾರುಕಟ್ಟೆ ವ್ಯವಹಾರದಲ್ಲಿ ಭಾರೀ ಚೇತರಿಕೆ ಕಂಡು ಬಂದಿದೆ.

ಹೊಸ ತೆರಿಗೆ ಶ್ರೇಣಿ 2019ರ ಎಪ್ರಿಲ್ 1ರಿಂದ ಅನ್ವಯವಾಗಲಿದೆ. 1961ರ ಆದಾಯ ತೆರಿಗೆ ಕಾಯ್ದೆಗೆ ಆಧ್ಯಾದೇಶದ ಮೂಲಕ ತಿದ್ದುಪಡಿ ಮಾಡಿ ಈ ಬದಲಾವಣೆಯನ್ನು ಜಾರಿಗೊಳಿಸಲಾಗುವುದು. ಮುಂಗಡ ತೆರಿಗೆ ಪಾವತಿಸಿದ್ದರೆ ಅದನ್ನು ಹೊಂದಿಸಲಾಗುವುದು ಎಂದು ಸರಕಾರ ತಿಳಿಸಿದೆ.

ಜಿಎಸ್‌ಟಿ ಸಮಿತಿಯ ಸಭೆಗೂ ಮುನ್ನ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಇತರ ಯಾವುದೇ ವಿನಾಯಿತಿ ಅಥವಾ ರಿಯಾಯಿತಿ ಪಡೆದಿರದ ದೇಶೀಯ ಸಂಸ್ಥೆಗಳಿಗೆ ಕಾರ್ಪೊರೇಟ್ ತೆರಿಗೆ ದರ ಶೇ.22 ಆಗಿರುತ್ತದೆ. ಉಪಕರ, ಮೇಲ್ತೆರಿಗೆ ಸೇರಿದರೆ ಇಂತಹ ಸಂಸ್ಥೆಗಳಿಗೆ ಇನ್ನು ಮುಂದೆ ಶೇ.25.17 ತೆರಿಗೆ ಬೀಳಲಿದೆ. ಅಲ್ಲದೆ ಶೇ.22ರ ತೆರಿಗೆ ಶ್ರೇಣಿಯನ್ನು ಆಯ್ಕೆ ಮಾಡುವ ಸಂಸ್ಥೆಗಳು ಕನಿಷ್ಟ ಪರ್ಯಾಯ ತೆರಿಗೆ(ಎಂಎಟಿ) ಪಾವತಿಸಬೇಕಿಲ್ಲ ಎಂದು ವಿವರಿಸಿದರು.

ಭಾರತದಲ್ಲಿ 400 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸುವ ಸಂಸ್ಥೆಗಳಿಗೆ ಇದುವರೆಗೆ ಅಧಿಕೃತವಾಗಿ ಶೇ.30 ಕಾರ್ಪೊರೇಟ್ ತೆರಿಗೆ ವಿಧಿಸಲಾಗುತ್ತಿದ್ದರೂ ವಿವಿಧ ರಿಯಾಯಿತಿ ಮತ್ತು ವಿನಾಯಿತಿಯ ಬಳಿಕ ವಿವಿಧ ವಿಭಾಗಗಳಡಿ ಶೇ.24ರಿಂದ ಶೇ.28ರಷ್ಟು ಪ್ರಮಾಣದ ತೆರಿಗೆಯನ್ನು ಪಾವತಿಸಬೇಕಾಗುತ್ತಿತ್ತು. ಇದು ಇನ್ನು ಮುಂದೆ ಶೇ.25.2ಕ್ಕೆ ಇಳಿಯಲಿದೆ.

400 ಕೋಟಿ ರೂ.ಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ಸಂಸ್ಥೆಗಳು ಇದುವರೆಗೆ ಶೇ.25 ಕಾರ್ಪೊರೇಟ್ ತೆರಿಗೆ ವಿಭಾಗದಲ್ಲಿದ್ದವು.

ಸೆಕ್ಯುರಿಟಿ ವ್ಯವಹಾರ ತೆರಿಗೆ ಪಾವತಿಸಬೇಕಿರುವ ಸಂಸ್ಥೆಗಳ ಇಕ್ವಿಟಿ ಶೇರುಗಳ ಮಾರಾಟದಿಂದ ಬರುವ ಬಂಡವಾಳ ಲಾಭದ ಮೇಲೆ ವರ್ಧಿತ ತೆರಿಗೆ ವಿಧಿಸದಿರಲೂ ಸರಕಾರ ನಿರ್ಧರಿಸಿದೆ(ಬಜೆಟ್‌ನಲ್ಲಿ ಬಂಡವಾಳ ಲಾಭದ ಮೇಲಿನ ಸರ್ಚಾರ್ಜ್ ಅನ್ನು ಹೆಚ್ಚಿಸಲಾಗಿತ್ತು). ಇದು ಶೇರು ಮಾರುಕಟ್ಟೆ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಿದೆ. ಜೊತೆಗೆ, ಜುಲೈ 5ರ ಮುನ್ನ ಶೇರುಗಳ ಮರುಖರೀದಿ ಘೋಷಿಸಿದ್ದ ಲಿಸ್ಟೆಡ್ ಸಂಸ್ಥೆಗಳ ಮೇಲೆ ಸೂಪರ್ ರಿಚ್ ತೆರಿಗೆ ವಿಧಿಸುವುದಿಲ್ಲ ಎಂದೂ ಸರಕಾರ ತಿಳಿಸಿದೆ.

ಜೂನ್‌ಗೆ ಅಂತ್ಯಗೊಂಡ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿಯ ಗತಿ ಕಳೆದ 6 ವರ್ಷಗಳಲ್ಲೇ ಅತ್ಯಂತ ಕನಿಷ್ಟ ಮಟ್ಟವಾದ ಶೇ.5ಕ್ಕೆ ಕುಸಿದ ಹಿನ್ನೆಲೆಯಲ್ಲಿ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಲು ಕೇಂದ್ರ ಸರಕಾರ ಕೈಗೊಂಡಿರುವ ಸರಣಿ ಕ್ರಮಗಳ ಸಾಲಿನಲ್ಲಿ ಕಾರ್ಪೊರೇಟ್ ತೆರಿಗೆ ಕಡಿತ ಹೊಸ ಉಪಕ್ರಮವಾಗಿದೆ.

ಏರಿಕೆ ಕಂಡ ಸೆನ್ಸೆಕ್ಸ್

ಕಾರ್ಪೊರೇಟ್ ತೆರಿಗೆ ಇಳಿಸುವ ಸರಕಾರದ ಘೋಷಣೆ ಹೊರಬಿದ್ದ ಬಳಿಕ ಶೇರುಪೇಟೆಯಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ. ಶುಕ್ರವಾರ ಬೆಳಗ್ಗಿನ ಅವಧಿಯಲ್ಲಿ ಬಾಂಬೆ ಸ್ಟಾಕ್‌ಎಕ್ಸ್‌ಚೇಂಜ್ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2,100 ಅಂಕ ಏರಿಕೆಯಾಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ 11,250ರ ಗಡಿ ದಾಟಿದೆ.

ಜೊತೆಗೆ ರೂಪಾಯಿ ವೌಲ್ಯವೂ ಚೇತರಿಸಿಕೊಂಡಿದ್ದು ಡಾಲರ್ ಎದುರು ರೂಪಾಯಿ ವೌಲ್ಯ 66 ಪೈಸೆಯಷ್ಟು ಹೆಚ್ಚಿದ್ದು 70.68ಕ್ಕೆ ತಲುಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News