ಗುಂಪುಹತ್ಯೆ ಪ್ರಕರಣಗಳ ಆರೋಪಿಗಳಿಗೆ ಈ ರಾಜ್ಯದಲ್ಲಿ ಸರಕಾರಿ ನೌಕರಿ ಇಲ್ಲ

Update: 2019-09-20 10:37 GMT

ಹೊಸದಿಲ್ಲಿ, ಸೆ.20: ಬಿಹಾರದಲ್ಲಿ ಗುಂಪು ದಾಳಿ ಮತ್ತು ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಎರಡೂವರೆ ತಿಂಗಳಲ್ಲಿ ಇಂತಹ 39 ಪ್ರಕರಣಗಳು ವರದಿಯಾಗಿವೆ. ಈ ದಾಳಿಗಳಲ್ಲಿ 14 ಜನ ಸಾವಿಗೀಡಾಗಿದ್ದು, 45 ಮಂದಿ ಗಾಯಗೊಂಡಿದ್ದಾರೆ. ಮಕ್ಕಳ ಕಳ್ಳತನದ ಶಂಕೆಯಿಂದ ಈ ಗುಂಪು ದಾಳಿ ಮತ್ತು ಹತ್ಯೆಗಳು ನಡೆಯುತ್ತಿವೆ.

ಗುಂಪು ಹತ್ಯೆಗಳನ್ನು ತಡೆಯಲು ರಾಜ್ಯದಲ್ಲಿ ನಿರ್ದಿಷ್ಟ ಕಾನೂನು ಇಲ್ಲವಾದರೂ, ಗುಂಪು ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಾಗಿರವವರಿಗೆ ಸರ್ಕಾರಿ ಉದ್ಯೋಗಕ್ಕೆ ಅವಕಾಶವಿಲ್ಲ ಎಂದು ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಇಂತಹ ಆರೋಪಿಗಳು ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿದ್ದರೆ, ಅವರನ್ನು ಉದ್ಯೋಗದಿಂದ ಕಿತ್ತುಹಾಕಲಾಗುವುದು ಎಂದು ಹೇಳಲಾಗಿದೆ.

ಗುಂಪು ಹತ್ಯೆ ಪ್ರಕರಣಗಳಲ್ಲಿ ಶಾಮೀಲಾದವರನ್ನು ಪತ್ತೆ ಮಾಡಲು ವಿಡಿಯೊ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ. ಇದುವರೆಗೆ 345 ಮಂದಿ ಇಂಥ ಪ್ರಕರಣಗಳಲ್ಲಿ ಶಾಮೀಲಾಗಿದ್ದು, 287 ಮಂದಿಯನ್ನು ಬಂಧಿಸಲಾಗಿದೆ.

"ಗುಂಪು ಹತ್ಯೆ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಗುರುತು ಇಲ್ಲದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಆದರೆ ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಪಡೆದ ವಿಡಿಯೊ ತುಣುಕುಗಳ ಆಧಾರದಲ್ಲಿ ಗುಂಪಿನಲ್ಲಿರುವ ವ್ಯಕ್ತಿಗಳನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ. ಜನಸಾಮಾನ್ಯರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎನ್ನುವುದು ಇದರ ಉದ್ದೇಶ" ಎಂದು ಸಿಐಡಿ ಡಿಜಿಪಿ ವಿನಯ ಕುಮಾರ್ ಹೇಳಿದ್ದಾರೆ.

"ಇತ್ತೀಚಿನ ಪ್ರಕರಣಗಳಲ್ಲಿ 2,000 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಲವು ಎಚ್ಚರಿಕೆಗಳ ಬಳಿಕವೂ ವದಂತಿಗಳ ಹಿನ್ನೆಲೆಯಲ್ಲಿ ಜನ ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News