ಸಂವಿಧಾನದ ರಕ್ಷಣೆಗಾಗಿ ಸೆ.26 ರಂದು ರಾಜ್ಯಾದ್ಯಂತ ದಸಂಸ ಪ್ರತಿಭಟನೆ: ರಾಜ್ಯ ಸಂಚಾಲಕ ನಾಗವಾರ

Update: 2019-09-20 16:51 GMT

ಬೆಂಗಳೂರು, ಸೆ.20: ಸಂವಿಧಾನದ ರಕ್ಷಣೆಗಾಗಿ ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಸೆ.26ರಂದು ಬೃಹತ್ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸದ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಆರ್ಥಿಕ ಪರಿಸ್ಥಿತಿಯನ್ನು ಹೀನಾಯ ಸ್ಥಿತಿಗೆ ತಳ್ಳಿದ್ದು, ದೇಶದ ಅತೀ ಮುಖ್ಯ ಸಾರ್ವಜನಿಕ ವಲಯ ಕ್ಷೇತ್ರ ಬಿಎಸ್‌ಎನ್‌ಎಲ್ ಕಂಪನಿಯ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಸಿದ್ಧ ಉಡುಪು ತಯಾರಿಕಾ ಕ್ಷೇತ್ರದಲ್ಲಿ ಉದ್ಯೋಗ ನಷ್ಟವಾಗಿದೆ. ರೈಲ್ವೆ ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಹಿಂದೆ ಭ್ರಷ್ಟಾಚಾರದ ವಾಸನೆ ಇದೆ ಎಂದು ದೂರಿದರು.

ಜಮ್ಮು ಕಾಶ್ಮೀರ ವಿಷಯದಲ್ಲಿ ಕೇಂದ್ರ ಸರಕಾರ ನಡೆದುಕೊಂಡ ರೀತಿಯನ್ನು ಪ್ರಜಾಪ್ರಭುತ್ವವಾದಿಗಳು ತೀವ್ರವಾಗಿ ವಿರೋಧಿಸಬೇಕಾಗಿದೆ. ತುರ್ತು ಪರಿಸ್ಥಿತಿಗಿಂತ ಹೆಚ್ಚಿನ ರೀತಿಯಲ್ಲಿ ರಾಜಕೀಯ ನಾಯಕರನ್ನು ಬಂಧಿಸಿರುವುದು, ಚರ್ಚೆ ಇಲ್ಲದೆ ತೀರ್ಮಾನ ತೆಗೆದುಕೊಂಡಿರುವುದು ಅಸಾಂವಿಧಾನಿಕ ನಡೆಯಾಗಿದೆ ಎಂದು ವಿಷಾದಿಸಿದರು.

ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ವಿಷಯದಲ್ಲಿ ಅನಗತ್ಯವಾಗಿ ವಿವಾದವನ್ನು ಎಬ್ಬಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನದ ಆಶಯವನ್ನು ಧಿಕ್ಕರಿಸುವ ಕ್ರಮವಾಗಿ ಮೀಸಲೇತರ ಗುಂಪಿನ ಜನರಿಗೆ ಶೇ.10ರಷ್ಟು ಮೀಸಲಾತಿ ಒದಗಿಸಲು ಸಂವಿಧಾನವನ್ನು ತಿದ್ದುಪಡಿ ಮಾಡಿರುವುದು ಸರಿಯಾದುದಲ್ಲ. ಅಲ್ಲದೆ, ಇತ್ತೀಚೆಗೆ ಆರೆಸ್ಸೆಸ್ ಮುಖಂಡ ಭಾಗವತ್ ಮೀಸಲಾತಿ ವಿಷಯದಲ್ಲಿ ಅಪಾರವಾದ ಅಸಹನೆ ಇದೆ. ಈ ಕುರಿತು ದೇಶಾದ್ಯಂತ ಚಚೆ ನಡೆಯಬೇಕು ಎಂದು ಹೇಳುವ ಮೂಲಕ ತಮ್ಮ ಎದೆಯಲ್ಲಿನ ವಿಷಯವನ್ನು ಬಯಲಿಗೆ ಇಟ್ಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಬೇಡಿಕೆಗಳು: ಸರಕಾರಿ ಭೂಮಿಯಲ್ಲಿ ಅಕ್ರಮ ಸಾಗುವಾಳಿದಾರರು ಫಾರಂ 57ರಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಕಂದಾಯ ಇಲಾಖೆ ಅವಕಾಶ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಎಲ್ಲಾ ನಿಗಮ ಮಂಡಳಿಗಳಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು. ಭೂ ಒಡೆತನ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಬೇಕು ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯಗಳ ಕಟ್ಟಡಗಳನ್ನು ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.

ಎಸ್‌ಟಿಪಿ ಹಾಗೂ ಟಿಎಸ್‌ಪಿ ಹಣವನ್ನು ಯಾವುದೇ ಕಾರಣಕ್ಕೂ ನೆರೆ ಸಂತ್ರಸ್ಥರಿಗೆ ಬಳಸಬಾರದು. ಅಲ್ಲದೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿಯನ್ನು ಅನುಸರಿಸಬೇಕು.

-ಲಕ್ಷ್ಮೀ ನಾರಾಯಣ ನಾಗವಾರ, ದಸಂಸದ ರಾಜ್ಯ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News