ಮಹಿಳೆಯರ ಸಂರಕ್ಷಣೆಗೆ ಒತ್ತಾಯಿಸಿ ಎಐಎಂಎಸ್‌ಎಸ್ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ

Update: 2019-09-20 17:05 GMT

ಬೆಂಗಳೂರು, ಸೆ.20: ಮಹಿಳೆಯರಿಗೆ ಸಂರಕ್ಷಣೆ, ಮೂಲಭೂತ ಸೌಕರ್ಯ ಹಾಗೂ ಆರೋಗ್ಯ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ಶುಕ್ರವಾರ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೌರ್ಯ ವೃತ್ತದ ವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ ಮಹಿಳೆಯರು ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಲೈಂಗಿಕ ಕಿರುಕುಳ ಸೇರಿದಂತೆ ಹಲವು ಬಗೆಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳೆಯರಿಗೆ ರಕ್ಷಣೆ ಅಗತ್ಯವಿದೆ. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೇ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಇದಕ್ಕೆ ಸೂಕ್ತ ವಾತಾವರಣ ಕಲ್ಪಿಸುವುದು ಸರಕಾರದ ಜವಾಬ್ದಾರಿಯೆಂದು ಒತ್ತಾಯಿಸಿದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಆರ್ಥಿಕ ನೆರವು, ತಾತ್ಕಾಲಿಕ ಆಶ್ರಯ ಒದಗಿಸಲು ರಾಜ್ಯದಾದ್ಯಂತ ಸಾಂತ್ವನ ಕೇಂದ್ರಗಳನ್ನು ಪ್ರಾರಂಭಿಸಲು ಸರಕಾರ ಮುಂದಾಗಬೇಕು. ಹಾಗೂ ದೌರ್ಜನ್ಯ ಎಸಗಿದ ಅಪರಾಧಿಗಳಿಗೆ ಶೀಘ್ರ ಶಿಕ್ಷೆ ವಿಧಿಸುವಂತಹ ವ್ಯವಸ್ಥೆ ನಿರ್ಮಾಣವಾಗಬೇಕೆಂದು ಪ್ರತಿಭಟನಾನಿರತ ಮಹಿಳೆಯರು ಆಗ್ರಹಿಸಿದರು.

ಈ ವೇಳೆ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಚಂದ್ರ ಪೂಜಾರಿ ಮಾತನಾಡಿ, ಸ್ತ್ರೀಯರು ಆತ್ಮಗೌರವ ಹಾಗೂ ಸ್ವಾವಲಂಬಿ ಜೀವನಕ್ಕೆ ಮುಂದಾದಾಗ ಮಾತ್ರ ಸಬಲೀಕರಣ ಸಾಧ್ಯವಾಗುತ್ತದೆ. ಭಾರತೀಯ ಸ್ತ್ರೀಯರ ಸ್ಥಿತಿಗತಿಯಲ್ಲಿ ಸಾಕಷ್ಟು ವೈರುಧ್ಯಗಳಿವೆ. ಮಹಿಳಾ ದಿನ ಎನ್ನುವುದು ಪುರುಷ ವಿರೋಧಿ ಆಚರಣೆಯಲ್ಲ. ನಮ್ಮ ನಮ್ಮಿಳಗೆ ವಿಚಾರ ಮಂಥನ ಮಾಡಿಕೊಳ್ಳಲು ಇರುವ ಒಂದು ಅವಕಾಶವೆಂದರು.

ಎಐಎಂಎಸ್ ಎಸ್ ರಾಜ್ಯಾಧ್ಯಕ್ಷೆ ಬಿ.ರ್.ಅಪರ್ಣಾ ಮಾತನಾಡಿ, ಮಹಿಳೆ ಮತ್ತು ಮಕ್ಕಳಿಗೆ ಆಹಾರ ಭದ್ರತೆ ಒದಗಿಸಬೇಕು. ಸಮಾನ ವೇತನ ಪಾವತಿಸಬೇಕು. ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ಭೂ ರಹಿತ ಕುಟುಂಬಗಳಿಗೆ ಭೂಮಿ ನೀಡಬೇಕು. ನಾಗರಿಕ ಹಕ್ಕುಗಳನ್ನು ರಕ್ಷಿಸಬೇಕು. ಅದೇ ರೀತಿ, ಮಹಿಳೆಗೆ ತನ್ನ ಮೇಲೆ ಆಗುತ್ತಿರುವ ವೈಯಕ್ತಿಕ ಕಿರುಕುಳ, ದೌರ್ಜನ್ಯಗಳ ಬಗ್ಗೆ ದೂರುಗಳನ್ನು ನೀಡಿದಾಗ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕಾನೂನು ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಸಮಿತಿ ಕಾರ್ಯದರ್ಶಿ ಎಸ್. ಶೋಭಾ ಮಾತನಾಡಿ, ಕೆಲಸ ಮಾಡುವ ಮಹಿಳೆಯರಲ್ಲಿ ಶೇ. 93ರಷ್ಟು ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿದ್ದು, ಬೀಡಿ, ಕರಕುಶಲ, ಗುಡಿಕೈಗಾರಿಕೆ, ಗಾರ್ಮೆಂಟ್ಸ್, ಬೀದಿ ಬದಿ ವ್ಯಾಪಾರ, ಕೃಷಿಭೂಮಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮಹಿಳೆಯರು ನಿಂದನೆ, ಲೈಂಗಿಕ ಶೋಷಣೆಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ದುಡಿಯುವ ಸ್ಥಳಗಳಲ್ಲಿ ಬಾಲವಾಡಿ, ವಿಶ್ರಾಂತಿ ಕೊಠಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಎಲ್ಲ ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಟ 18 ಸಾವಿರ ರೂ. ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಸ್‌ಯುಸಿಐ(ಸಿ) ರಾಜ್ಯ ಕಾರ್ಯದರ್ಶಿ ಕೆ.ಉಮಾ, ಉಪಾಧ್ಯಕ್ಷೆ ಎಂ.ಎನ್. ಮಂಜುಳಾ, ಎ.ಶಾಂತಾ ಸೇರಿದಂತೆ ಪ್ರಮುಖರಿದ್ದರು.

ಹಕ್ಕೊತ್ತಾಯಗಳು:

1. ಎಲ್ಲ ಮಹಿಳೆಯರಿಗೂ ಶಿಕ್ಷಣ ಮತ್ತು ಉದ್ಯೋಗ ಖಾತ್ರಿಪಡಿಸಿ

2. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು 6 ತಿಂಗಳೊಳಗೆ ಇತ್ಯರ್ಥಗೊಳಿಸಿ

3. ಪ್ರಚೋದನಕಾರಿಯಾಗಿರುವ ಅಶ್ಲೀಲ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿ

 4. ದುಡಿಯುವ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News