ಸುಪ್ರೀಂಕೋರ್ಟ್‌ನಲ್ಲಿನ್ನು ಖಾಯಂ ಸಂವಿಧಾನ ಪೀಠ

Update: 2019-09-21 03:41 GMT

ಹೊಸದಿಲ್ಲಿ, ಸೆ.21: ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಖಾಯಂ ಸಂವೀಧಾನಪೀಠವನ್ನು ಸ್ಥಾಪಿಸಲು ಸುಪ್ರೀಂಕೋರ್ಟ್ ಮುಂದಾಗಿದೆ. ಇದು ಸಂಕೀರ್ಣ ಸಂವಿಧಾನಾತ್ಮಕ ಪ್ರಶ್ನೆಗಳ ವಿಮರ್ಶೆಗೆ ಮತ್ತು ಕಾನೂನುಗಳನ್ನು ವಿಶ್ಲೇಷಿಸಲು ನೆರವಾಗಲಿದೆ.

1950ರಲ್ಲಿ ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ ಎಂಟು ಮಂದಿ ನ್ಯಾಯಮೂರ್ತಿಗಳೊಂದಿಗೆ ಆರಂಭವಾದ ದೇಶದ ಅತ್ಯುನ್ನತ ಕೋರ್ಟ್‌ನ ಬಲ ಇಂದು 34 ಆಗಿದೆ. ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಅನಿವಾರ್ಯತೆ ಪ್ರತಿಪಾದಿಸಿದ್ದರು. ಇದಕ್ಕೆ ಅನುಗುಣವಾಗಿ ಕಾನೂನಿಗೆ ಸೂಕ್ತ ತಿದ್ದುಪಡಿ ತಂದು ಸಂಸತ್ತಿನ ಒಪ್ಪಿಗೆ ಪಡೆಯಲಾಗಿತ್ತು.

ಇದರಿಂದಾಗಿ ಅಕ್ಟೋಬರ್ 1ರಿಂದ ಐವರು ನ್ಯಾಯಮೂರ್ತಿಗಳ ಖಾಯಂ ಸಂವಿಧಾನಪೀಠ ರಚಿಸಲು ಸಿಜೆಐಯವರಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಕ್ಕಿದಂತಾಗಿದೆ. ಹಿಂದೆ ಇದ್ದ ರೂಢಿಯಂತೆ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ, ಅಗತ್ಯ ಬಿದ್ದರೆ ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ಇಂಥ ಪ್ರಮುಖ ವಿಷಯಗಳನ್ನು ವಹಿಸಲಾಗುತ್ತಿತ್ತು. ಅದರೆ ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಐವರು ನ್ಯಾಯಮೂರ್ತಿಗಳ ಸಂವಿಧಾನಪೀಠ ರಚಿಸಿದರೆ, ಇತರ ಪ್ರಕರಣಗಳ ವಿಚಾರಣೆಗೆ ವಿಳಂಬವಾಗುತ್ತಿತ್ತು.

ಇದುವರೆಗೆ ಸುಪ್ರೀಂಕೋರ್ಟ್ 164 ಪ್ರಕರಣಗಳನ್ನು ಇಬ್ಬರು ನ್ಯಾಯಮೂರ್ತಿಗಳ ಪೀಠದಿಂದ ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ಪರಾಮರ್ಶೆಗೆ ನೀಡಿದೆ. ದೀರ್ಘಕಾಲದಿಂದ ಬಾಕಿ ಇರುವ 164 ಪ್ರಕರಣಗಳ ಇತ್ಯರ್ಥಕ್ಕೆ ಸಿಜೆಐಯವರು ಮೂವರು ನ್ಯಾಯಮೂರ್ತಿಗಳ ಐದು ಖಾಯಂ ಪೀಠಗಳನ್ನು ರಚಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News