ಭದ್ರತಾ ವೈಫಲ್ಯ: ಜೆಯು ಮೇಲೆ ರಾಜ್ಯಪಾಲರ ಕೆಂಗಣ್ಣು

Update: 2019-09-21 03:59 GMT

ಕೊಲ್ಕತ್ತಾ, ಸೆ.21: ಜಾಧವಪುರ ವಿವಿಯಲ್ಲಿ ಗುರುವಾರ ಆರು ಗಂಟೆಗಳ ಕಾಲ ನಡೆದ ದಾಂಧಲೆ ವೇಳೆ ರಾಜ್ಯಪಾಲರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿಲ್ಲ ಎಂದು ರಾಜಭವನ ಆಕ್ಷೇಪಿಸಿದ್ದು, "ಕುಲಪತಿಗಳ ಈ ಗಂಭೀರ ಲೋಪ" ಗಮನಕ್ಕೆ ಬಂದಿದೆ ಎಂದು ಹೇಳಿದೆ. ಅಂತೆಯೇ ಪೊಲೀಸರು ಸೂಕ್ತ ಭದ್ರತೆ ನೀಡಿಲ್ಲ ಎನ್ನುವುದು ರಾಜಭವನದ ಆಕ್ಷೇಪವಾಗಿದೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕ ಉದ್ಘಾಟನೆಗೆ ತೆರಳಿದ್ದ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಮೇಲೆ ಕೆಲ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರು ಎಂದು ಆಪಾದಿಸಲಾಗಿದೆ. ರಾಜ್ಯಪಾಲ ಜಗದೀಪ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಜತೆ ಚರ್ಚಿಸಿದ ಬಳಿಕ ಸಂಜೆ ಕ್ಯಾಂಪಸ್‌ಗೆ ತೆರಳಿ ಸಚಿವರನ್ನು ರಕ್ಷಿಸಿದ್ದರು. ಆದರೆ ಕ್ಯಾಂಪಸ್‌ಗೆ ತೆರಳದಂತೆ ಮಮತಾ ಬ್ಯಾನರ್ಜಿ, ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಈ ಘಟನೆಯನ್ನು ಕುಲಪತಿಯವರ ಗಂಭೀರ ಲೋಪ ಎಂದು ರಾಜಭವನ ಪರಿಗಣಿಸಿದ್ದು, ತಮ್ಮ ಹೊಣೆಯನ್ನು ನಿಭಾಯಿಸಲು ವಿಫಲರಾಗಿದ್ದಾರೆ ಎಂದು ಹೇಳಿದೆ. ಜತೆಗೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ವಿಫಲರಾಗಿದ್ದು, ರಾಜ್ಯಪಾಲರ ಭೇಟಿ ವೇಳೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದು ರಾಜ್ಯಪಾಲರ ಗಮನ ಸೆಳೆದಿದ್ದು, ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ರಾಜಭವನದ ಪ್ರಕಟನೆ ಹೇಳಿದೆ.

ಈ ಘಟನೆಗಳ ಬಗ್ಗೆ 48 ಗಂಟೆಗಳ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ರಾಜಭವನ, ವಿಶ್ವವಿದ್ಯಾನಿಲಯ ಆಡಳಿತಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News