ಸೊಸೆಗೆ ಥಳಿಸಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ: ಸಿಸಿಟಿವಿ ವಿಡಿಯೋ ವೈರಲ್

Update: 2019-09-21 08:16 GMT

ಹೈದರಾಬಾದ್, ಸೆ.21: ಪತ್ನಿ ಹಾಗೂ ಪುತ್ರನೊಂದಿಗೆ ಸೇರಿ ಸೊಸೆಗೆ ಕಿರುಕುಳ, ಚಿತ್ರಹಿಂಸೆ ನೀಡಿದ್ದಕ್ಕಾಗಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನೂಟಿ ರಾಮ ಮೋಹನ್ ರಾವ್  ಅವರ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ ಐದು ತಿಂಗಳುಗಳ ನಂತರ ಸೊಸೆಗೆ ಹಲ್ಲೆ ನಡೆಸುತ್ತಿರುವ ಸಿಸಿಟಿವಿ  ದೃಶ್ಯ ಈಗ ಹೊರಬಿದ್ದಿದೆ.

ಎಪ್ರಿಲ್ 20, 2019ರಂದು ದಾಖಲಾದ ಈ ಸಿಸಿಟಿವಿ ದೃಶ್ಯಾವಳಿಯನ್ನು ಸಂತ್ರಸ್ತೆ ಎಂ. ಸಿಂಧು ಶರ್ಮ ಅವರ ಕುಟುಂಬ ಬಿಡುಗಡೆಗೊಳಿಸಿದೆ. ಆರೋಪಿ ರಾವ್ ಆಂಧ್ರ ಪ್ರದೇಶ ಹಾಗೂ ಮದ್ರಾಸ್ ಹೈಕೋರ್ಟ್ ಗಳಲ್ಲಿ ಸೇವೆ ಸಲ್ಲಿಸಿ ಎಪ್ರಿಲ್ 2017ರಲ್ಲಿ ನಿವೃತ್ತರಾಗಿದ್ದರು.

ಒಟ್ಟು 2:20 ನಿಮಿಷ ಅವಧಿಯ ಈ ವೀಡಿಯೋದಲ್ಲಿ ಮನೆಯಲ್ಲಿ ನಡೆದ  ವಾಗ್ವಾದವೊಂದರ ನಂತರ ರಾವ್ ಅವರ ಪುತ್ರ ಎನ್ ವಸಿಷ್ಠ ಸಿಂಧುಗೆ ಹೊಡೆಯುತ್ತಿರುವುದು ಕಾಣಿಸುತ್ತದೆ. ರಾವ್ ಮತ್ತವರ ಪತ್ನಿ ದುರ್ಗಾ ಜಯಲಕ್ಷ್ಮಿ ಆಗ  ಆ ಕೊಠಡಿ ಪ್ರವೇಶಿಸಿ ಜಗಳ ನಿಲ್ಲಿಸಲು ಮಧ್ಯ ಪ್ರವೇಶಿಸುತ್ತಿರುವುದು ಕಾಣಿಸುತ್ತದೆ. ವಸಿಷ್ಠ ತನ್ನ ಪತ್ನಿಗೆ ಗುದ್ದುತ್ತಾ ಆಕೆಗೆ ಕಪಾಳಮೋಕ್ಷಗೈಯ್ಯುತ್ತಿರುವುದು ಹಾಗೂ ರಾವ್ ಆಕೆಯ ಕೈ ಹಿಡಿದೆಳೆದು ಆಕೆಯನ್ನು ಸೋಫಾಗೆ ದೂಡುತ್ತಿರುವುದು ಕಾಣಿಸುತ್ತದೆ. ವೀಡಿಯೋದ ಕೊನೆಗೆ ಸಂತ್ರಸ್ತೆ ಸಿಂಧು ಅವರ ಮಗು ಕೋಣೆಗೆ ಪ್ರವೇಶಿಸಿ ತಾಯಿಯತ್ತ ಓಡಿ ಬಂದರೂ ಮಗುವನ್ನು ಹೊರಕ್ಕೆ ಕಳುಹಿಸಲಾಗುತ್ತದೆ.

ಎಪ್ರಿಲ್ 27ರಂದು ಸಿಂಧು ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಪತಿ ಹಾಗೂ ಅತ್ತೆ,  ಮಾವ ವಿರುದ್ಧ  ಪ್ರಕರಣ ದಾಖಲಿಸಿದ್ದರಲ್ಲದೆ ಎಪ್ರಿಲ್ 20ರಂದು ರಾತ್ರಿ ನಡೆದ ಹಲ್ಲೆಯಿಂದ ತಾನು ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿತ್ತು ಎಂದು ದೂರಿದ್ದರು.

ಮಗಳಿಗೆ ಹಲ್ಲೆ ನಡೆಸಿ ನಂತರ ಅವರೇ ಆಕೆಯನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು, ಆಕೆಯ  ಬೆನ್ನು, ಎದೆ, ಕೈಗಳಲ್ಲಿ ಗಾಯಗಳಿದ್ದವು. ಆಕೆಗೆ ಮಾನಸಿಕ ಸ್ಥಿಮಿತವಿಲ್ಲ, ತನಗೆ ತಾನೇ ಗಾಯ ಮಾಡಿಕೊಂಡಿದ್ದಳೆಂದು ಕಥೆ ಕಟ್ಟಿದ್ದರೆಂದು ಸಿಂಧು ತಂದೆ ಎಂ.ವಿ. ಶರ್ಮ ಹೇಳಿದ್ದಾರೆ.

ಘಟನೆ ನಡೆದ ನಂತರ ಸಿಂಧು ಕುಟುಂಬ ವಿಡಿಯೋ ಆಧಾರ ನೀಡುವುದಾಗಿ ಹೇಳಿದ್ದರೂ ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮಕ್ಕಳನ್ನು ಗಮನದಲ್ಲಿರಿಸಿ ದಂಪತಿ ನಡುವೆ ಹೊಂದಾಣಿಕೆ ತರಲು ಪೊಲೀಸರು ರಾಜಿ ಪಂಚಾಯತಿಕೆ ನಡೆಸಿದ್ದು, ಮಾತುಕತೆ ಮುಂದುವರಿದಿದ್ದಂತಹ ಸಂದರ್ಭದಲ್ಲಿಯೇ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಗೊಂಡಿದ್ದು ಅದನ್ನು ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News