ನಾನೊಬ್ಬ ‘ಉಗ್ರವಾದಿ, ಅಪಹರಣಕಾರ' ಎಂಬಂತೆ ಶ್ರೀನಗರದಿಂದ ವಾಪಸ್ ಕಳಿಸಿದರು: ಯಶವಂತ್ ಸಿನ್ಹಾ

Update: 2019-09-21 09:24 GMT

ಹೊಸದಿಲ್ಲಿ, ಸೆ.21: ಜಮ್ಮು ಕಾಶ್ಮೀರದ ಕೆಲ ಸ್ನೇಹಿತರನ್ನು ಭೇಟಿಯಾಗಲು ತೆರಳಿದ್ದ ತನ್ನನ್ನು ಅಲ್ಲಿನ ಆಡಳಿತ ತಾನು ‘ಅಪಹರಣಕಾರ'  ಹಾಗೂ ‘ಉಗ್ರವಾದಿ' ಎಂಬಂತೆ ಶ್ರೀನಗರದಿಂದ ಬಲವಂತವಾಗಿ ವಾಪಸ್ ಕಳುಹಿಸಿತ್ತು ಎಂದು  ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಹೇಳಿದ್ದಾರೆ.

indianexpress.com ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಕಾಶ್ಮೀರ ಕಣಿವೆಯಲ್ಲಿ ಹಲವು ವರ್ಷಗಳಿಂದ ಶಾಂತಿಗಾಗಿ ಶ್ರಮಿಸುತ್ತಿರುವ ‘ಕನ್ಸರ್ನ್ಡ್ ಸಿಟಿಝನ್ಸ್ ಗ್ರೂಪ್’  ಜತೆ ತಾನು ಸಹಯೋಗ ಹೊಂದಿದ್ದಾಗಿಯೂ ತಿಳಿಸಿದ್ದಾರೆ.

“ನಾವು ಅಲ್ಲಿಗೆ ತಲುಪಿದಾಗ ಒಬ್ಬ ವ್ಯಕ್ತಿ ನಮ್ಮ ಬಳಿ ಬಂದು ತನ್ನನ್ನು ಬುಡ್ಗಾಮ್  ಜಿಲ್ಲಾಧಿಕಾರಿ ಎಂದು ಪರಿಚಯಿಸಿಕೊಂಡರು. ಅವರ ಜತೆ ಇತರ ಪೊಲೀಸ್ ಅಧಿಕಾರಿಗಳಿದ್ದರು. ನಾನು ನಿಮ್ಮ ಅಭಿಮಾನಿ ಎಂದು ಅವರು ಹೇಳಿದಾಗ ಏನೋ ತಪ್ಪಾಗಿದೆ ಎಂದು ಅರಿತೆ. ಇತರರು ಕಾಶ್ಮೀರಕ್ಕೆ ಹೋಗಬಹುದು ಆದರೆ ನಿಮ್ಮನ್ನು ಅನುಮತಿಸಲಾಗದು ಎಂದು ಆತ ಹೇಳಿದರು'' ಎಂದು ಸಿನ್ಹಾ ವಿವರಿಸಿದ್ದಾರೆ.

“ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 144 ಅನ್ವಯ ಬುಡ್ಗಾಮ್ ಗೆ ಪ್ರವೇಶ ನಿಷೇಧಿಸಿ ಎರಡು ಗಂಟೆಗಳ ನಂತರ ಎಸ್‍ಪಿ ಲಿಖಿತ ಆದೇಶ ಕಳುಹಿಸಿದರು ಹಾಗೂ ನನ್ನ ಭೇಟಿ ಕಾನೂನು ಸುವ್ಯವಸ್ಥೆಗೆ ಸಮಸ್ಯೆಯೊಡ್ಡಬಹುದೆಂದು ಅದರಲ್ಲಿ ಹೇಳಲಾಗಿತ್ತು'' ಎಂದು ಸಿನ್ಹಾ ತಿಳಿಸಿದ್ದಾರೆ.

ಇದಕ್ಕೆ ಸಿನ್ಹಾ ವಿರೋಧಿಸಿದಾಗ ಇನ್ನೊಂದು ಆದೇಶ ಪ್ರತಿ ನೀಡಿ ವಾಪಸ್ ತೆರಳುವಂತೆ ಹೇಳಲಾಯಿತು. “ಅಲ್ಲಿಂದ ದಿಲ್ಲಿಗೆ ಆ ದಿನದ ಕೊನೆಯ ವಿಮಾನ ಸಂಜೆ 5:30ರ ಸುಮಾರಿಗೆ ಹೊರಡುವುದಿತ್ತು. ಆಗ ನಾನೊಬ್ಬ ಉಗ್ರವಾದಿ ಅಥವಾ ಅಪಹರಣಕಾರನೋ ಎಂಬಂತೆ ಎಸ್‍ಪಿ ಸುಮಾರು 20-25 ಅಧಿಕಾರಿಗಳೊಂದಿಗೆ ನನ್ನ ಬಳಿ ಬಂದು ನನ್ನನ್ನು ಬಲವಂತವಾಗಿ ವಿಮಾನ ಹತ್ತಿಸಿದರು. ನನ್ನ ಸಹವರ್ತಿಗಳನ್ನು ಬಂಧಿಯಾಗಿಸಿ ನನಗೇನಾಯಿತೆಂದು ಅವರಿಗೆ ತಿಳಿಯದಂತೆ ಮಾಡಿದರು. ಈ ರೀತಿ ನನ್ನನ್ನು ವಾಪಸ್ ಕಳುಹಿಸಲಾಯಿತು'' ಎಂದು ಅವರು ವಿವರಿಸಿದ್ದಾರೆ.

ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರನ್ನು ಮಹಾನ್ ರಾಷ್ಟ್ರವಾದಿ ಎಂದು ಬಣ್ಣಿಸಿದ ಸಿನ್ಹಾ “ನೀವು ಫಾರೂಕ್ ಅಬ್ದುಲ್ಲಾ ಅವರಂತಹವರನ್ನು ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಬಂಧಿಸಿದ್ದೀರಿ. ಕಾಶ್ಮೀರಿ ನಾಯಕರನ್ನು ತಮ್ಮ ಸ್ವಂತ ನೆಲಕ್ಕೆ ಹೋಗಲು ಅನುಮತಿಸುತ್ತಿಲ್ಲ. ಗುಲಾಂ ನಬಿ ಆಝಾದ್ ಹಾಗೂ ಸೀತಾರಾಂ ಯಚೂರಿಯಂತಹ ನಾಯಕರು ಸುಪ್ರೀಂ ಕೋರ್ಟ್ ಅನುಮತಿಯೇಕೆ ಪಡೆಯಬೇಕು?, ಅದೇನು ವೀಸಾ ನೀಡುವ ಪ್ರಾಧಿಕಾರವಲ್ಲ. ಕಾಶ್ಮೀರ ನಮ್ಮ ದೇಶದ ಒಂದು ಭಾಗ ಹಾಗೂ ಎಲ್ಲರೂ ಅಲ್ಲಿಗೆ ಹೋಗಬಹುದಾಗಿದೆ'' ಎದು ಸಿನ್ಹಾ ಹೇಳಿದರು.

ಸರಕಾರದ ಟೀಕಾಕಾರರಾಗಿರುವುದರಿಂದ ನಿಮ್ಮನ್ನು ಟಾರ್ಗೆಟ್ ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿನ್ಹಾ “ಕಣಿವೆಯಲ್ಲಿ ಶಾಂತಿ ಹೇಗೆ ಸ್ಥಾಪಿಸಬಹುದೆಂಬುದರ ಬಗ್ಗೆ ಸರಕಾರಕ್ಕೆ ಸಲಹೆ ನೀಡುತ್ತಿದ್ದೇನೆ, ನನ್ನನ್ನು ವಾಪಸ್ ಕಳುಹಿಸಿದ್ದಕ್ಕೆ ಕಾರಣ ತಿಳಿಯುತ್ತಿಲ್ಲ ಅವರೇ ವಿವರಿಸಬೇಕು'' ಎಂದರು.

ಮೆಹಬೂಬಾ ಮುಫ್ತಿ ಅವರ ದಿಗ್ಬಂಧನ ಅಗತ್ಯವಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, “ಅವರಿಗೆ ಪ್ರಚೋದನಾತ್ಮಕ ಭಾಷಣ ನೀಡುವ ಇತಿಹಾಸವಿದೆ. ಒಮ್ಮೆ ಅಟಲ್ ಜೀ ಕಾಶ್ಮೀರಕ್ಕೆ ಹೋದಾಗ ಅವರ ಭಾಷಣಗಳಿಂದಾಗಿಯೇ ವೇದಿಕೆಯಲ್ಲಿ ಅವಕಾಶ ನೀಡಲಾಗಿರಲಿಲ್ಲ. ಬಿಜೆಪಿ ಅವರ ಜತೆ ಸೇರಿಯೇ ಸರಕಾರ ರಚಿಸಿತು. ನಾನು ಇಂತಹ ಶಿಫಾರಸು ಮಾಡಿರಲಿಲ್ಲ'' ಎಂದರು.

ಆರ್ಥಿಕ ಹಿಂಜರಿತದ ಕುರಿತಂತೆ ಮಾತನಾಡಿದ ಸಿನ್ಹಾ, ಸರಕಾರ ಆರ್ಥಿಕತೆಯ ಬಗ್ಗೆ ಸುಳ್ಳು ಹೇಳುತ್ತಿದೆ ಎಂದು ಗೊತ್ತಿತ್ತು ಅಮಾನ್ಯೀಕರಣ ಹಾಗೂ ಜಿಎಸ್ಟಿ ಜಾರಿ ಸಮಸ್ಯೆಗೆ ಕಾರಣವಾಯಿತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News