ರಾಜ್ಯ ಉಪ ಚುನಾವಣೆಯಲ್ಲಿ ಬಿಎಸ್ಪಿ ಸ್ಪರ್ಧೆ: ಮಾರಸಂದ್ರ ಮುನಿಯಪ್ಪ

Update: 2019-09-21 09:56 GMT

ಬೆಂಗಳೂರು, ಸೆ.21-ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಈ ಸಂಬಂಧ ಸಿದ್ಧತೆ ಚುರುಕುಗೊಳಿಸಲಾಗುವುದು ಎಂದು ಬಹುಜನ ಸಮಾಜ ಪಕ್ಷ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಹೇಳಿದ್ದಾರೆ.

ನಗರದಲ್ಲಿಂದು ದೇವರಾಜ ಅರಸು ಭವನದಲ್ಲಿ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಅಭಿಯಂತರ ಎಸ್.ಸಿ.ಜಯಚಂದ್ರ ಅವರನ್ನು ಬಿಎಸ್ಪಿಗೆ ಸೇರ್ಪಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರಾಜ್ಯದ 17 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಲವು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಇದೆ. ಹಾಗಾಗಿ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿದಿದೆ. ಆದರೆ, ಇನ್ನಿತರ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಅವರು ತಿಳಿಸಿದರು.

ಬಿಎಸ್ಪಿ ರಾಜ್ಯಾಧ್ಯಕ್ಷ  ಎಂ.ಕೃಷ್ಣಮೂರ್ತಿ ನೂತನ ಸಾರಥಿ ಆಗಿದ್ದು, ಇವರ ನೇತೃತ್ವದಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಪಕ್ಷವನ್ನು ಸದೃಢವಾಗಿ ಕಟ್ಟಲಾಗುವುದು ಎಂದ ಅವರು, ಕಾನ್ಶಿರಾಂ ಅವರು ಶೋಷಿತ ಸಮುದಾಯಕ್ಕೆ ಅಧಿಕಾರಕ್ಕೆ ಪಾಲು ನೀಡುವಲ್ಲಿ ದೇಶಾದ್ಯಂತ ಹೋರಾಟ ಮಾಡಿದ ಮಹಾನ್ ವ್ಯಕ್ತಿ.ಅವರ ವಿಚಾರಧಾರೆ ಎಲ್ಲೆಡೆ ಹರಡಿಸಬೇಕು ಎಂದರು.

ಬಿಎಸ್ಪಿ ಹಿರಿಯ ನಾಯಕ ಎಂ.ಎಲ್.ತೋಮರ್ ಮಾತನಾಡಿ, ಅಂಬೇಡ್ಕರ್‌ ಹಾಗೂ ಕಾನ್ಶಿರಾಮ್‌ ಅವರುಗಳ ತ್ಯಾಗದ ಪರಿಣಾಮ ನಾವು ಇಂದು ಈ ಸುಸ್ಥಿತಿಯಲ್ಲಿದ್ದೇವೆ. ನಮ್ಮ ಸ್ಥಿತಿಯನ್ನು ಇನ್ನಷ್ಟು ಗಟ್ಟಿಯಾಗಿಸಿಕೊಳ್ಳುವ ಸಲುವಾಗಿ ಬಿಎಸ್ಪಿಗೆ ಬೆಂಬಲಿಸಬೇಕು. ಹಣಕ್ಕಾಗಿ ಅಂಬೇಡ್ಕರ್‌ ಅವರು ನೀಡಿರುವ ಮತವನ್ನು ನಾವ್ಯಾರೂ ಮಾರಿಕೊಳ್ಳಬಾರದು. ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ದಿಲ್ಲಿವರೆಗೆ ಹೋಗಲು ದಾರಿ ಮಾಡಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿದರು. ಬಿಎಸ್ಪಿ ನಾಯಕರಾದ ಶೆರಿಯಾರ್ ಖಾನ್, ಕೆ.ಬಿ.ವಾಸು, ಹೆಚ್.ಡಿ.ಬಸವರಾಜು, ಡಿ.ಆರ್.ನಾರಾಯಣಸ್ವಾಮಿ, ನಹೀದಾ ಸಲ್ಮಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News