ದೇಶದಲ್ಲಿ ಫೋರ್ಡ್ ಕಂಪೆನಿ ಬಾಗಿಲು ಮುಚ್ಚಿದೆ, ಹೆಚ್ಚಿನ ಕಾರು ಕಂಪೆನಿಗಳು ನಷ್ಟದಲ್ಲಿವೆ

Update: 2019-09-21 10:58 GMT

ಹೊಸದಿಲ್ಲಿ, ಸೆ.21: ಭಾರತದ ಹೆಚ್ಚಿನ ಕಾರು ತಯಾರಿಕಾ ಕಂಪೆನಿಗಳು ಸದ್ಯ ನಷ್ಟದಲ್ಲಿರುವುದರಿಂದ ಭಾರತದಲ್ಲಿ ಹೂಡಿಕೆ ಮಾಡಿರುವ ಹಲವು ವಿದೇಶಿ ಕಂಪೆನಿಗಳು ಬಾಗಿಲು ಮುಚ್ಚುತ್ತಿವೆ ಎಂದು ಮಾರುತಿ ಸುಝುಕಿ ಅಧ್ಯಕ್ಷ ಆರ್. ಸಿ. ಭಾರ್ಗವ ಹೇಳಿದ್ದಾರೆ.

ಯುರೋಪ್ ದೇಶಗಳಲ್ಲಿರುವಂತಹ  ಮಾಲಿನ್ಯ ನಿಯಂತ್ರಣ ಗುಣಮಟ್ಟ (ಎಮಿಶನ್ ಸ್ಟಾಂಡರ್ಡ್) ಕಾಪಾಡಬೇಕೆಂಬ ಸರಕಾರದ ನಿರ್ಧಾರವೇ ಈ ಸಮಸ್ಯೆಗೆ ಕಾರಣಗಳಲ್ಲೊಂದಾಗಿದೆ ಎಂದು ಅವರು ಹೇಳಿದ್ದಾರೆ. “ಆದರೆ ಭಾರತೀಯರಿಗೆ ಯುರೋಪಿಯನ್ನರಿಗಿರುವಷ್ಟೇ ಖರ್ಚು ಮಾಡುವ ಸಾಮರ್ಥ್ಯವಿಲ್ಲ. ನಿಯಮಾವಳಿಗಳನ್ನು ಬದಲಾಯಿಸುವ ಮುನ್ನ ಕಾರು ತಯಾರಿಕಾ ವೆಚ್ಚದಲ್ಲಿರುವ ವ್ಯತ್ಯಾಸದ ಬಗ್ಗೆ  ಯಾರೂ ಮಾತನಾಡಿಲ್ಲ'' ಎಂದು ಭಾರ್ಗವ ಹೇಳಿದರು.

ಮುಂಬೈಯಲ್ಲಿ ನಡೆದ ಇಂಡಿಯಾ ಟುಡೇ ಕಾಂಕ್ಲೇವ್ 2019ರಲ್ಲಿ  ಮಾತನಾಡಿದ ಸಂದರ್ಭ ನೀತಿ ಆಯೋಗದ ಉಪಾಧ್ಯಕ್ಷ  ರಾಜೀವ್ ಕುಮಾರ್ ಆಡಿದ ಮಾತಿಗೆ ಪ್ರತಿಕ್ರಿಯೆಯಾಗಿ ಭಾರ್ಗವ ಮೇಲಿನಂತೆ ಹೇಳಿದ್ದಾರೆ.

ಆಟೋಮೊಬೈಲ್ ಕ್ಷೇತ್ರದ ಸಮಸ್ಯೆಯ ಕುರಿತಂತೆ ಮಾತನಾಡಿದ ರಾಜೀವ್ ಕುಮಾರ್, ಈಗಿನ ಪರಿಸ್ಥಿತಿಗೆ ಆಟೋಮೊಬೈಲ್ ಕಂಪೆನಿಗಳೂ ಕಾರಣ  ಎಂದಿದ್ದರು. “ದೀರ್ಘ ಕಾಲ ಉತ್ತಮ ನಿರ್ವಹಣೆ ತೋರಿದ್ದ ಈ ಕ್ಷೇತ್ರ ಈಗ ಸರ್ವ ಪ್ರಯತ್ನ ನಡೆಸಿ ಮಾರಾಟ ಪ್ರಮಾಣ ಹೆಚ್ಚಿಸಬೇಕು, ಕಂಪೆನಿಗಳು ದರ ಕಡಿತಗೊಳಿಸಿ ಮಾರಾಟ ಹೆಚ್ಚಿಸಬೇಕು. ದರ ಕಡಿತದಿಂದ ಬೇಡಿಕೆ ಹೆಚ್ಚಾಗುತ್ತದೆ, ಈಗಿನ ಬಿಕ್ಕಟ್ಟಿಗೆ ಕಂಪೆನಿಗಳೇ ಕಾರಣ''ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಭಾರ್ಗವ, “ಜಿಎಂ4 ಹಾಗೂ ಫೋರ್ಡ್ ಕಂಪೆನಿಗಳು ನಷ್ಟದಿಂದಾಗಿ ಮುಚ್ಚಿವೆ, ವಿದೇಶಿ ಕಂಪೆನಿಗಳೂ ಇಲ್ಲಿ ಹಣ ಕಳೆದುಕೊಂಡಿವೆ. ಟಾಟಾ ಮೋಟರ್ಸ್ ಕೂಡ ನಷ್ಟದಲ್ಲಿದೆ'' ಎಂದರು.

ತಮ್ಮ ಕಂಪೆನಿ ಹಿತಮಿತವಾಗಿ ಖರ್ಚು ಮಾಡಿದ್ದರಿಂದ ಹಾಗೂ ಉನ್ನತಾಧಿಕಾರಿಗಳಿಗೆ ಕಡಿಮೆ ವೇತನ ನೀಡುವ ಮೂಲಕ ಮೀಸಲು ನಿಧಿ ಹೆಚ್ಚಿಸಲು ಸಾಧ್ಯವಾಗಿದೆ ಎಂದು ಭಾರ್ಗವ ಹೇಳಿದಾಗ ಹುಂಡೈನಂತಹ ಕಂಪೆನಿ  ರಫ್ತು  ಮಾಡುತ್ತಿರುವುದರಿಂದ ಉತ್ತಮ ನಿರ್ವಹಣೆ ತೋರಿದೆ ಎಂದು ರಾಜೀವ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News