ಸಹಕಾರಿ ಕ್ಷೇತ್ರಗಳ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಸಭೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2019-09-21 12:12 GMT

ಬೆಂಗಳೂರು, ಸೆ. 21: ಸಹಕಾರಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ಮತ್ತು ಪರಿಹಾರ ಕಂಡುಕೊಳ್ಳಲು ಶೀಘ್ರದಲ್ಲೆ ಎಲ್ಲ ಸಹಕಾರಿ ಧುರೀಣರ ಸಭೆಯನ್ನು ಕರೆಯಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 5 ಕೋಟಿ ರೂ.ಚೆಕ್ ಅನ್ನು ಸ್ವೀಕರಿಸಿ ಮಾತನಾಡಿದ ಅವರು, ಸಾಲ ಯೋಜನೆಯಲ್ಲಿ ಬಾಕಿಯಿರುವ 1,970 ಕೋಟಿ ರೂ.ಮತ್ತು ಬಡ್ಡಿ ಸಹಾಯಧನ ಯೋಜನೆಯಲ್ಲಿ 518 ಕೋಟಿ ರೂ.ಬಾಕಿ ಇರುವ ಕುರಿತು ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ರೈತರ ಸಾಲಮನ್ನಾ ಬಳಿಕ ಸಹಕಾರಿ ಬ್ಯಾಂಕುಗಳಿಗೆ ಸರಕಾರದಿಂದ ಬರಬೇಕಾದ ಹಣದ ಬಗ್ಗೆ ಚರ್ಚೆ ನಡೆಸುವ ಮೂಲಕ ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದ ಯಡಿಯೂರಪ್ಪ, ರಾಜ್ಯದ ಹಣಕಾಸು ಸ್ಥಿತಿ ಶೀಘ್ರವೇ ಸುಧಾರಣೆಯಾಗಲಿದೆ ಎಂದು ನುಡಿದರು.

ರಾಜ್ಯದಲ್ಲಿನ ನೆರೆ ಸಂತ್ರಸ್ತರ ನೆರವಿಗಾಗಿ ಸಹಕಾರಿ ರಂಗದ ಬ್ಯಾಂಕುಗಳು 5 ಕೋಟಿ ರೂ.ದೇಣಿಗೆ ನೀಡಿರುವುದಕ್ಕೆ ಎಲ್ಲ ಸಹಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ಯಡಿಯೂರಪ್ಪ, ಆರ್ಥಿಕ ಶಕ್ತಿ ಇರುವ ಸಹಕಾರಿ ಬ್ಯಾಂಕುಗಳು ನೆರೆ ಸಂತ್ರಸ್ತರಿಗೆ ಮತ್ತಷ್ಟು ನೆರವು ನೀಡಬೇಕು ಎಂದು ಕೋರಿದರು.

ಸಹಕಾರಿ ರಂಗದ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚೆ ನಡೆಸುವುದು ಸೂಕ್ತವಲ್ಲ, ಏಕಾಏಕಿ ಸಭೆಗೆ ಆಗಮಿಸಿದ್ದೇನೆ. ಹೀಗಾಗಿ ಹೆಚ್ಚಿನ ಚರ್ಚೆ ಮಾಡುವುದಿಲ್ಲ. ಶೀಘ್ರವೇ ಸಹಕಾರಿ ಧುರೀಣರ ಸಭೆ ಕರೆಯಲಿದ್ದು ಅಲ್ಲಿ ಸಹಕಾರಿ ಕ್ಷೇತ್ರದ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದೆಂದು ಅವರು ಪುನರುಚ್ಚರಿಸಿದರು.

ಬಾಕಿ ಹಣ ಬಿಡುಗಡೆ ಮನವಿ: ರೈತರ ಸಾಲಮನ್ನಾ ಯೋಜನೆಯಡಿ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕುಗಳಿಗೆ ಸರಕಾರದಿಂದ ಬರಬೇಕಿರುವ ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಸಿಎಂಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಬೆಳೆ ಸಾಲಮನ್ನಾ ಮಾಡಿದ ಅರ್ಹ ರೈತರ ಒಟ್ಟು ಬೇಡಿಕೆ 8,316ಕೋಟಿ ರೂ.ಗಳ ಪೈಕಿ 8,151ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳಿದ ಅಸಲು ಬಡ್ಡಿ ಸೇರಿ 21 ಡಿಸಿಸಿ ಬ್ಯಾಂಕುಗಳಿಗೆ ಒಟ್ಟು 165 ಕೋಟಿ ರೂ.ಬಿಡುಗಡೆ ಮಾಡಬೇಕಿದೆ. ಅಲ್ಲದೆ, ಸಹಕಾರದಿಂದ ಸಹಕಾರಿ ಸಂಸ್ಥೆಗಳಿಗೆ ಬರಬೇಕಿರುವ 2,488 ಕೋಟಿ ರೂ.ತ್ವರಿತವಾಗಿ ಬಿಡುಗಡೆ ಮಾಡಬೇಕು. ಸಹಕಾರ ಸಂಘಗಳ ಕಾಯ್ದೆಗೆ ಅಗತ್ಯ ತಿದ್ದುಪಡಿ ತರಬೇಕು. ಸಹಕಾರ ಸಂಘಗಳ ಅಧಿನಿಯಮ-1959ರಲ್ಲಿ ಹಿಂದೆ ಇದ್ದಂತೆ 128-ಎ ಅನ್ನು ಪುನರ್ ಜಾರಿಗೊಳಿಸಬೇಕೆಂದು ಅವರು ಆಗ್ರಹಿಸಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬ್ಯಾಂಕಿನ ಉಪಾಧ್ಯಕ್ಷ ಚಂದ್ರಶೇಖರಯ್ಯ, ಆಡಳಿತ ಮಂಡಳಿ ಸದಸ್ಯರಾದ ಆರ್.ನರೇಂದ್ರ, ಎಸ್.ಎಲ್.ಧರ್ಮೆಗೌಡ, ಶಿವರಾಮ್ ಹೆಬ್ಬಾರ್, ಎಚ್.ವೈ.ಮೇಟಿ, ಸುಧಾಕರ್, ರಾಜೇಂದ್ರ ಕುಮಾರ್, ಮಂಜುನಾಥ್‌ಗೌಡ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ ಹಾಜರಿದ್ದರು.

‘ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅನ್ನು ಸೂಪರ್ ಸೀಡ್ ಮಾಡುವ ಮೂಲಕ ನನ್ನನ್ನು ಕೆಳಗಿಳಿಸುವ ಪ್ರಯತ್ನ ನಡೆಸಲಾಯಿತು. ಆದರೆ, ಆ ವೇಳೆ ನನ್ನ ನೆರವಿಗೆ ಧಾವಿಸಿದವರು ಮುಖ್ಯಮಂತ್ರಿ ಬಿ.ಎಸ್.ಡಿಯೂರಪ್ಪನವರು’

-ಕೆ.ಎನ್.ರಾಜಣ್ಣ, ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ 

‘ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರನ್ನು ತಡೆಯುವ ಪ್ರಯತ್ನಗಳೇ ಹೆಚ್ಚು ನಡೆಯುತ್ತವೆ. ಒಳ್ಳೆಯ ಕೆಲಸ ಮಾಡುವವರಿಗೆ ಕಲ್ಲುಹಾಕಿ ಅಡ್ಡಿ ಪಡಿಸುವುದು ಸರಿಯಲ್ಲ’

-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News