ಈಡಿಗ ಬಿಲ್ಲವ ನಿಗಮ ಮಂಡಳಿ ಸ್ಥಾಪಿಸಲು ಸಿಎಂಗೆ ಮನವಿ: ಕೋಟ ಶ್ರೀನಿವಾಸ ಪೂಜಾರಿ

Update: 2019-09-22 16:24 GMT

ಬೆಂಗಳೂರು, ಸೆ. 22: ಈಡಿಗ ಬಿಲ್ಲವ ಸಮುದಾಯದ ಅಭಿವೃದ್ಧಿಗಾಗಿ ನಾರಾಯಣ ಗುರು ನಿಗಮ ಮಂಡಳಿಯನ್ನು ಸ್ಥಾಪಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ರವಿವಾರ ನಗರದ ಪುರಭವನದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ಆಯೋಜಿಸಿದ್ದ ನಾರಾಯಣಗುರು ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು, ಈಡಿಗ ಬಿಲ್ಲವ ಸಮಾಜದ 26 ಉಪಜಾತಿಗಳನ್ನು ಒಳಗೊಂಡಂತೆ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಮಂಡಳಿ ಶೀಘ್ರವೇ ಕಾರ್ಯರೂಪಕ್ಕೆ ಬರಲಿದ್ದು, ಸಮುದಾಯಕ್ಕೆ ಇದರಿಂದ ಉಪಯೋಗವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗುರುಕೃಪಾ ಆಶ್ರಮದ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ಜಾತಿ ಯಾವುದಾದರೇನು ಮನುಷ್ಯ ಓಳ್ಳೆಯವನಾಗಿರಬೇಕು. ಮನುಷ್ಯನಿಗೆ ಮನುಷ್ಯತ್ವವೇ ಜಾತಿ ಎಂದು ತಿಳಿಸಿಕೊಟ್ಟವರು ನಾರಾಯಣ ಗುರು. ಶಾಂತಿ ಸೌಹಾರ್ದತೆಯನ್ನು ಜಗತ್ತಿಗೆ ಸಾರಿದ್ದಾರೆ. ಅವರ ಜೀವನ ಸಂದೇಶ ಪಾಲಿಸುವಲ್ಲಿ ನಾವು ವಿಫಲವಾಗಿದ್ದೇವೆ. 1908ರಲೇ ಗುರುಗಳು ವಿಶ್ವ ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದೆ. ಜಗತ್ತು ಪುಟ್ಟದಾಗುತ್ತಿದೆ ಎಂದು ಶೈಕ್ಷಣಿಕ ರಂಗಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದರು.

ಹಿಂದೂಧರ್ಮದಲ್ಲಿನ ಉದಾತ್ತ ಚಿಂತನೆಯ ಪ್ರಭಾವಕ್ಕೆ ಒಳಗಾಗಿದ್ದ ನಾರಾಯಣ ಗುರುಗಳಿಗೆ ಸಮಾಜದಲ್ಲಿನ ಅಸಮಾನತೆ, ಜಾತಿ ತಾರತಮ್ಯ, ಲಿಂಗತಾರತಮ್ಯ, ಮೌಢ್ಯಾಚರಣೆಗಳ ಬಗ್ಗೆ ತೀವ್ರ ಅಸಮಾಧಾನ ಇತ್ತು. ಬಡವರು, ಶೋಷಿತರು, ದೀನ- ದಲಿತರನ್ನು ಮಾನವೀಯ ಅಂತಃಕರಣದಿಂದ ಕಾಣುತ್ತಿದ್ದ ನಾರಾಯಣ ಗುರೂಜಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಲು ಪ್ರಯತ್ನಿಸುತ್ತಿದ್ದರು. ಜಾತಿ, ಮತ, ಪಂಥ, ಪಂಗಡ, ಲಿಂಗ ಆಧರಿಸಿ ತಾರತಮ್ಯ ಮಾಡದೆ ಎಲ್ಲರಿಗೂ ಮುಕ್ತ ಅವಕಾಶ ನೀಡುತ್ತಿದ್ದರು. ದೇವಾಲಯಗಳಲ್ಲಿ ಎಲ್ಲರಿಗೂ ಪ್ರವೇಶ ಸಿಗಲೇಬೇಕೆಂದು ಹೋರಾಟ ಮಾಡಿದರು.

ಇನ್ನು, ಗುರುಗಳು ಕಾವಿ ತೊಡದೆ ಬಿಳಿ ಬಟ್ಟೆ ತೊಟ್ಟು ಸನ್ಯಾಸಿಯ ಸನ್ಮಾರ್ಗದಲ್ಲಿ ಬದುಕಿದ ನಾರಾಯಣ ಗುರೂಜಿ ಧರ್ಮ ಪರಿಪಾಲನಾ ಯೋಗಮ್ ಸಂಸ್ಥೆಯ ಮೂಲಕ ಅತ್ಯಂತ ಹಿಂದುಳಿದ, ಅಲಕ್ಷಿತ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಿದರು. ನಾರಾಯಣ ಗುರುಗಳಿಂದ ಪ್ರೆರಿತರಾಗಿದ್ದ ಕವಿ ರವಿಂದ್ರನಾಥ ಠಾಗೂರ್ ಅವರು ಜಗತ್ತಿನ ಹಲವು ಸಂತರನ್ನು ಭೇಟಿ ಮಾಡಿದ್ದೇನೆ. ಆದರೆ ಗುರುಗಳ ಮಹಾನ್ ವ್ಯಕ್ತಿತ್ವಕ್ಕೆ ಸರಿಸಾಟಿ ಯಾವ ಮತ್ತೊಬ್ಬರನ್ನು ಕಂಡಿಲ್ಲ ಎಂದಿರುವುದನ್ನು ಸ್ಮರಿಸಿದರು.

ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ ಮಾತನಾಡಿ, ಈಡಿಗ ಬಿಲ್ಲವ ಸಮಾಜದ 26 ಉಪಜಾತಿಗಳನ್ನು ಸಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಒಗ್ಗೂಡಿಸಲಾಗಿದೆ. ಅಲ್ಲದೆ, ಸಂಘಟನೆಯ ಮೂಲಕ ಸಮಾಜಕ್ಕೆ ಬೇಕಾದ ಸರಕಾರಿ ಸೌಲಭ್ಯಗಳನ್ನು ಪಡೆಯಲು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.

ಬೇಡಿಕೆಗಳು: ಈಡಿಗ ಬಿಲ್ಲವ ಸಮಾಜದ 26 ಉಪಜಾತಿಗಳನ್ನು ಒಳಗೊಂಡತೆ ಅಭಿವೃದ್ಧಿ ನಿಗಮ ಸ್ಥಾಪನೆ. ಬೆಂಗಳೂರಿನ ಮಂತ್ರಿಮಾಲ್ ನಮ್ಮ ಮೆಟ್ರೋ ರೈಲು ನಿಲ್ದಾಣಕ್ಕೆ ಬ್ಯಹ್ಮಶ್ರೀ ನಾರಾಯಣಗುರು ಎಂದು ನಾಮಕರಣ ಮಾಡಬೇಕು ಹಾಗೂ ಕುಲವೃತ್ತಿಯಾದ, ಹೆಂಡ, ಸಾರಾಯಿ, ಮಾರಿ ತಮ್ಮ ಜೀವನವನ್ನು ಸಾಗಿಸುತ್ತಿದ್ದ ಸಮಾಜದ ಜನರಿಗೆ, ಭೂಮಿ ಮತ್ತು ಸರಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯ

ಅಣೆಕಟ್ಟೆ ಉದ್ದೇಶಕ್ಕಾಗಿ ಭೂಮಿ ಕಳೆದುಕೊಂಡ ಮತ್ತು ಭೂಹೀನ ರೈತರಿಗೆ ಹಕ್ಕು ಪತ್ರ ಮತ್ತು ಜಮೀನು ಮಂಜೂರಾತಿ ಹಾಗೂ ಸರಕಾರದ ಉದ್ಯೋಗ ನೀಡಬೇಕು. ಸಮಾಜದ ಬಡ ಜನರಿಗೆ ನಿವೇಶನ ಮತ್ತು ಮನೆ ಮಂಜೂರು ಮಾಡಬೇಕು ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಲ್ಲೊಡ್ಡು ಡ್ಯಾಮ್ ಯೋಜನೆಯನ್ನು ಕೈ ಬಿಡಬೇಕೆಂದು ಮನವಿ.

ಶೂದ್ರರಿಗೆ ದೇವಸ್ಥಾನದ ಒಳಪ್ರವೇಶಕ್ಕೆ ನಿರ್ಬಂಧ ಇತ್ತು. ಇದರ ವಿರುದ್ಧ ನಾರಾಯಣಗುರುಗಳು ಅಂದು ಸಿಡಿದೆದ್ದರು.ಆಗಿನ ಕಾಲದಲ್ಲೇ ನ್ರಾಾಯಣಗುರುಗಳು ಒಂದೇ ಜಾತಿ, ಒಂದೇ ಕುಲ ಎಂದು ಕರೆ ನೀಡಿದ್ದರು.

-ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News