ಸುಹೈಲ್ ಯೂಸುಫ್ ಬೆಂಗಳೂರು ಮೇಯರ್ ಆಗಬೇಕು ಎಂದು ರವೀಶ್ ಕುಮಾರ್ ಹೇಳಿದ್ದೇಕೆ?

Update: 2019-09-23 07:14 GMT

ಬೆಂಗಳೂರಿನ ಬ್ರಿಗೇಡ್ ರೋಡ್ ಅಂಗಡಿ ಮಾಲಕರ ಸಂಘದ ಕಾರ್ಯದರ್ಶಿಯಾಗಿರುವ ಸುಹೈಲ್ ಯೂಸುಫ್ ಎಂಬವರು ಬಿಬಿಎಂಪಿಯ ಮೇಯರ್ ಆಗಬೇಕು, ಆ ಮೂಲಕ ನಿಜವಾದ ಸಮಾಜಸೇವಕನಿಗೆ ಸೂಕ್ತ ಸ್ಥಾನ ಲಭಿಸಬೇಕು ಎಂದು ಹಿರಿಯ ಪತ್ರಕರ್ತ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ರವೀಶ್ ಕುಮಾರ್ ಅವರು ಹೇಳಿದ್ದಾರೆ.

ನಗರದ ಬಹುಮುಖ್ಯ ಸಮಸ್ಯೆಯಾದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸುಹೈಲ್ ಯೂಸುಫ್ ಅವರ ಕೆಲಸ ಮಾದರಿ ಎಂದು ರವೀಶ್ ಕುಮಾರ್ ಹೇಳಿದ್ದು, ಯಾವುದೇ ಲಾಭ ಪಡೆಯದೆ ಸೇವೆ ಸಲ್ಲಿಸುತ್ತಿರುವ ಅವರನ್ನು ಹಾಡಿಹೊಗಳಿದ್ದಾರೆ. ರವೀಶ್ ಕುಮಾರ್ ಅವರ ಫೇಸ್ಬುಕ್ ಪೋಸ್ಟ್ ನ ಅನುವಾದ ಈ ಕೆಳಗಿದೆ.

“ಇವರು ಸುಹೈಲ್ ಯೂಸುಫ್. ಬೆಂಗಳೂರಿನ ಬ್ರಿಗೇಡ್ ರೋಡ್ ಅಂಗಡಿ ಮಾಲಕರ ಸಂಘದ ಕಾರ್ಯದರ್ಶಿ. ಈ  ಹುದ್ದೆಯಲ್ಲಿದ್ದುಕೊಂಡು ಯೂಸುಫ್ ಸಾಹಬ್ ಅವರು ಅದ್ಭುತ ಕೆಲಸ ಮಾಡಿದ್ದಾರೆ. ಈ ಪ್ರದೇಶದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದ ಸಾಕಷ್ಟು ಅನಾನುಕೂಲಗಳು ಸೃಷ್ಟಿಯಾಗಿದ್ದವು. ಇಲ್ಲಿ ನೂರಕ್ಕೂ ಹೆಚ್ಚು ಅಂಗಡಿಗಳಿವೆ. ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದು ಕಷ್ಟಸಾಧ್ಯವಾಗಿತ್ತು. ಯೂಸುಫ್ ಸಾಹಬ್ ಅವರು ತಮ್ಮ ಸಂಘದ ಹಣ ಬಳಸಿ ಪಾರ್ಕಿಂಗ್ ವೆಂಡಿಂಗ್ ಮೆಶಿನ್ ಸ್ಥಾಪಿಸುವ ನಿರ್ಧಾರ ಕೈಗೊಂಡರು. ಇಂತಹ ಮೆಶಿನ್ ಗಳನ್ನು ನಾವು ಪ್ಯಾರಿಸ್ ಅಥವಾ ನ್ಯೂಯಾರ್ಕ್ ನಲ್ಲಿ ನೋಡಬಹುದು. ಇಂತಹ ವ್ಯವಸ್ಥೆಯಡಿಯಲ್ಲಿ ಕಾರನ್ನು ಪಾರ್ಕ್ ಮಾಡಿ, ಮಶೀನಿನಲ್ಲಿ ಕಾರಿನ ನಂಬರ್ ಪಂಚ್ ಮಾಡಿ ಒಂದು ನಿರ್ದಿಷ್ಟ ಅವಧಿಗೆ ಕಾರನ್ನು ಪಾರ್ಕ್ ಮಾಡಿ ಅಲ್ಲಿಂದ ಹೊರಡಬಹುದು”.

“ಅವರು  14, 15 ವರ್ಷಗಳ ಹಿಂದೆ ಪ್ಯಾರಿಸ್ ಗೆ ಹೋಗಿ ಅಲ್ಲಿಂದ ಎಂಟು, ಹತ್ತು ಮಶೀನುಗಳನ್ನು ತಂದರು ಹಾಗೂ ತಮ್ಮ ಪ್ರದೇಶದಲ್ಲಿ 85 ಕಾರುಗಳ ಪಾರ್ಕಿಂಗಿಗೆ ಅನುಕೂಲ ಕಲ್ಪಿಸಿದರು. ಪಾರ್ಕಿಂಗ್ ದರವನ್ನು ಹತ್ತು ಅಥವಾ ಇಪ್ಪತ್ತು ರೂಪಾಯಿ ನಿಗದಿಪಡಿಸಿ ಎರಡು ಗಂಟೆಗಿಂತ ಹೆಚ್ಚು ಸಮಯ ಪಾರ್ಕಿಂಗ್ ಮಾಡುವುದಕ್ಕೆ ನಿರ್ಬಂಧ ಹೇರಲಾಯಿತು”.

“ತಮ್ಮ ಸ್ವಂತ ಹಣದಿಂದ ಇಲ್ಲಿ ವೆಂಡಿಂಗ್ ಮೆಶಿನ್ ಅಳವಡಿಸಿದ ಅವರು ಅದರಿಂದ ಒಂದು ನಯಾಪೈಸೆ ಲಾಭ ಪಡೆದಿಲ್ಲ. ಈ ಪಾರ್ಕಿಂಗ್ ವ್ಯವಸ್ಥೆಯಿಂದ ಬೃಹತ್ ಬೆಂಗಳೂರು ನಗರ ಪಾಲಿಕೆಗೆ ವಾರ್ಷಿಕ 27 ಲಕ್ಷ  ರೂ. ಆದಾಯ  ದೊರಕಿಸಿ ಕೊಡುತ್ತಿರುವುದಾಗಿ ಯೂಸುಫ್ ಜೀ ಹೇಳುತ್ತಾರೆ. ಈ ಮಶೀನು ಅಳವಡಿಸಿ ಅವರು ಪಾರ್ಕಿಂಗ್ ಮಾಫಿಯಾಗೆ ಅಂತ್ಯ ಹಾಡಿದ್ದಾರೆ. ವೆಂಡಿಂಗ್ ಯಂತ್ರದಿಂದ ವರ್ಷಪೂರ್ತಿ ಆಡಿಟ್ ವರದಿ ಹೊರ ಬರುತ್ತಲೇ ಇದೆ. ಒಂದೊಂದು ಪೈಸೆ ಲೆಕ್ಕ ಹಾಕಿ ಪಾಲಿಕೆಗೆ ನೀಡಲಾಗುತ್ತದೆ. ಈಗ ಅವರು ಸ್ವಲ್ಪ ಸ್ಥಳವನ್ನು ಮಹಿಳಾ ಚಾಲಕರಿಗೆ ಮೀಸಲಿರಿಸಿದ್ದಾರೆ”.

“ಇಡೀ ಬೆಂಗಳೂರಿನ ಜವಾಬ್ದಾರಿ ತಮಗೆ ದೊರೆತರೆ ಆಯಾಯ ಸ್ಥಳದ ಅಂಗಡಿ ಮಾಲಕರ ಸಂಘಗಳ ಹಣದಿಂದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹಾಗೂ ಮಾಫಿಯಾಗೆ ಅಂತ್ಯ ಹಾಡುವುದಾಗಿ ಯೂಸುಫ್ ಹೇಳುತ್ತಾರೆ. ಯೂಸುಫ್ ಸಾಹಬ್ ಅವರ ಮಳಿಗೆಯನ್ನು 1939ರಲ್ಲಿ ಸ್ಥಾಪಿಸಲಾಗಿತ್ತು.  ಇದೇ ಸ್ಥಳದಲ್ಲಿ ಮರ್ಫೀ ರೇಡಿಯೋ ಮಾರಾಟ ಮಾಡುತ್ತಿದ್ದ ರೇಡಿಯೋ ಹೌಸ್ ಇದೆ. ಈಗ ಅಲ್ಲಿ ಸೋನಿ ಮಳಿಗೆಯಿದೆ. ಬ್ರಿಗೇಡ್ ರಸ್ತೆಯಲ್ಲಿಯೇ ಕೆಫೆ ಕಾಫಿ ಡೇ ತನ್ನ ಮೊದಲ ಮಳಿಗೆ ಆರಂಭಿಸಿತ್ತು”.

“ಯೂಸುಫ್ ಸಾಹಬ್ ಅವರ ಈ ಕಾರ್ಯಕ್ಷಮತೆ ಶ್ಲಾಘನೀಯ. ಬೆಂಗಳೂರಿನ ಜನತೆ ಅವರ ಬಳಿ ತೆರಳಿ ಅವರನ್ನು ನಗರದ ಮೇಯರ್ ಆಗಿ ಆಯ್ಕೆ ಮಾಡಬೇಕು. ಸುಹೈಲ್ ಸಾಹಬ್ ಅವರ ಜತೆಗಿನ ಭೇಟಿ ನನ್ನ ಬೆಂಗಳೂರು ಯಾತ್ರೆಯ ದೊಡ್ಡ  ಫಲಶ್ರುತಿ. ನೀವು ಹೀರೋ ಆಗಿದ್ದೀರಿ ಯೂಸುಫ್ ಸಾಹಬ್”.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News