ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಬುಧವಾರಕ್ಕೆ ಮುಂದೂಡಿಕೆ

Update: 2019-09-23 13:56 GMT

ಹೊಸದಿಲ್ಲಿ,ಸೆ.23: ಕರ್ನಾಟಕದ ಅನರ್ಹ ಶಾಸಕರು ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯವು ಬುಧವಾರ ವಿಚಾರಣೆಯನ್ನು ನಡೆಸುವುದಾಗಿ ತಿಳಿಸಿದೆ.

ಅ.21ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವನ್ನು ಈ ಶಾಸಕರು ಕೋರಿದ್ದಾರೆ.

ಸ್ಪೀಕರ್ ಅವರ ಅನರ್ಹತೆ ಆದೇಶಗಳಂತೆ ವಿಧಾನಸಭೆಯು ವಿಸರ್ಜನೆಗೊಳ್ಳುವ 2023ರವರೆಗೂ ಈ ಶಾಸಕರು ಚುನಾವಣೆಗಳಲ್ಲಿ ಸ್ಪರ್ಧಿಸದಂತಾಗಿದೆ ಎಂದು ಅನರ್ಹರ ಪರ ವಕೀಲ ಮುಕುಲ ರೋಹಟ್ಗಿ ಅವರು ನ್ಯಾ.ಎನ್.ವಿ.ರಮಣ ನೇತೃತ್ವದ ಪೀಠಕ್ಕೆ ತಿಳಿಸಿದರು.

ಉಪ ಚುನಾವಣೆಯ ಅಧಿಸೂಚನೆಯನ್ನು ಈಗಾಗಲೇ ಹೊರಡಿಸಲಾಗಿರುವುದರಿಂದ ಅದಕ್ಕೆ ತಡೆಯಾಜ್ಞೆಯನ್ನು ನೀಡುವಂತಿಲ್ಲ ಎಂದು ಚುನಾವಣಾ ಆಯೋಗದ ವಕೀಲರು ಹೇಳಿದರು.

ಉಪ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ಸೆ.30 ಕೊನೆಯ ದಿನಾಂಕವಾಗಿದೆ.

ಮಾಜಿ ಸ್ಪೀಕರ್ ಕ್ರಮಗಳು ಸಂಪೂರ್ಣ ನಿರಂಕುಶ ಮತ್ತು ಅಸಮಂಜಸವಾಗಿವೆ ಹಾಗೂ ಕಾನೂನಿನ ಎದುರು ಎಲ್ಲರೂ ಸಮಾನರು ಎಂದು ಸಾರುವ ಸಂವಿಧಾನದ ವಿಧಿ 14ನ್ನು ಉಲ್ಲಂಘಿಸಿದೆ ಎಂದು ತಮ್ಮ ಅರ್ಜಿಯಲ್ಲಿ ವಾದಿಸಿರುವ ಅನರ್ಹ ಶಾಸಕರು,ತಮ್ಮ ರಾಜೀನಾಮೆಗಳ ಕುರಿತು ಜು.11ರಂದು ನಿರ್ಧಾರ ಕೈಗೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಅದೇ ದಿನ ನೀಡಿದ್ದ ಆದೇಶವನ್ನು ಕುಮಾರ ಪಾಲಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

ಅರ್ಜಿದಾರರು ವಿಧಿ 19ರಡಿ ಯಾವುದೇ ವ್ಯಾಪಾರ,ಉದ್ಯಮ ಮತ್ತು ವೃತ್ತಿಯನ್ನು ನಡೆಸುವ ಮೂಲಭೂತ ಹಕ್ಕು ಹೊಂದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಅನರ್ಹರ ಪರ ವಕೀಲರು,ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಸೇವೆ ಸೇರಿದಂತೆ ತಮ್ಮ ಆಯ್ಕೆಯ ಯಾವುದೇ ವೃತ್ತಿಯನ್ನು ಕೈಗೊಳ್ಳುವ ತನ್ನ ಕಕ್ಷಿದಾರರ ಹಕ್ಕನ್ನು ಸ್ಪೀಕರ್ ಸಂಪೂರ್ಣವಾಗಿ ಕಾನೂನು ಬಾಹಿರ ಮತ್ತು ಅಸಂವಿಧಾನಿಕ ಆದೇಶದ ಮೂಲಕ ನಿರಾಕರಿಸುವಂತಿಲ್ಲ. ಸ್ಪೀಕರ್ ಕ್ರಮವು ವಿಧಿ 19 ಮತ್ತು 21ರಡಿ ಖಾತರಿಪಡಿಸಲಾಗಿರುವ ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News