ಭದ್ರತಾ ಪಡೆಯಿಂದ ಹಲ್ಲೆಗೊಳಗಾದ ಕಾಶ್ಮೀರದ ಬಾಲಕ ಆತ್ಮಹತ್ಯೆ: ಕುಟುಂಬಸ್ಥರ ಆರೋಪ

Update: 2019-09-23 09:38 GMT

ಶ್ರೀನಗರ, ಸೆ.23: ಸೇನಾ ಶಿಬಿರವೊಂದರ ಸಮೀಪ ಭದ್ರತಾ ಪಡೆಗಳಿಂದ ಹಲ್ಲೆಗೊಳಗಾಗಿ ಮಾನಸಿಕವಾಗಿ ಜರ್ಜರಿತನಾದ ಪುಲ್ವಾಮದ 15 ವರ್ಷದ ಬಾಲಕ ಸೆಪ್ಟೆಂಬರ್ 17ರಂದು ಚಂಡಿಗಮ್ ಗ್ರಾಮದ ತನ್ನ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದಿದ್ದಾನೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಾಲಕನನ್ನು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.

ಆತ ಆತ್ಮಹತ್ಯೆಗೈಯ್ಯುವ ಮುನ್ನಾ ದಿನ ಹತ್ತಿರದ ತಾಹಬ್ ಗ್ರಾಮದಲ್ಲಿನ ಸೇನಾ ಶಿಬಿರದ ಮೇಲೆ ಗ್ರೆನೇಡ್ ದಾಳಿ ನಡೆದಿತ್ತು. ಅದೇ ಶಿಬಿರದಲ್ಲಿದ್ದ ಭದ್ರತಾ ಪಡೆಗಳು ಬಾಲಕನನ್ನು ಬಂಧಿಸಿ ಕರೆದೊಯ್ದು ಹಲವು ಗಂಟೆಗಳ ನಂತರ ಬಿಡುಗಡೆಗೊಳಿಸಿದ್ದರು. ಅದೇ ದಿನ ಸಂಜೆ ನಡೆದ ಘಟನೆಯನ್ನು ಬಾಲಕ ತನ್ನ ಸೋದರಿ ಸೈಮಾಗೆ ತಿಳಿಸಿದ್ದರೂ ಹೆತ್ತವರಿಗೆ ಹಾಗೂ ಕುಟುಂಬ ಸದಸ್ಯರ ಬಳಿ ಈ ಘಟನೆಯ ಬಗ್ಗೆ ಬಾಯ್ಬಿಟ್ಟರಿಲಿಲ್ಲ ಎಂದು ಆರೋಪಿಸಲಾಗಿದೆ.

ಹತ್ತನೇ ತರಗತಿಯಲ್ಲಿದ್ದ ಯಾವರ್ ಘಟನೆಯಿಂದ ತೀವ್ರ ನೊಂದಿದ್ದನೆಂದು ಸೈಮಾ ಆರೋಪಿಸಿದ್ದಾಳೆ. ಮರುದಿನ ಹನ್ನೊಂದು ಗಂಟೆಗೆ ಮನೆಗೆ ಬಂದು ತಾಯಿಯ ಕೋಣೆಗೆ ತೆರಳಿ ಒಳಗಿನಿಂದ ಚಿಲಕ ಹಾಕಿದ್ದ ಆತ ಕಿಟಕಿಯಿಂದ ತಲೆ ಹೊರ ಹಾಕಿ ಆಗಾಗ ವಾಂತಿ ಮಾಡುತ್ತಿದ್ದುದನ್ನು ತಾಯಿ ಗಮನಿಸಿದ್ದರು. ನಂತರ ಹೊರಬಂದ ಬಾಲಕ ತಲೆ ನೋಯುತ್ತಿದೆ ಎಂದಿದ್ದರಿಂದ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆತ ಹಿಂದಿನ ದಿನ ರಾತ್ರಿ ವಿಷ ಸೇವಿಸಿದ್ದ ಎಂದು ಆಗ ತಿಳಿದು ಬಂದಿತ್ತು. ಬಾಲಕನ್ನು ನಂತರ ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಎರಡು ದಿನಗಳ ಚಿಕಿತ್ಸೆಯ ಬಳಿಕ ಸೆಪ್ಟೆಂಬರ್ 19ರಂದು ಆತ ಮೃತಪಟ್ಟಿದ್ದ ಎಂದು ಆರೋಪಿಸಲಾಗಿದೆ.

ಆದರೆ ಸೇನಾ ವಕ್ತಾರರು ಬಾಲಕನ ಮೇಲೆ ಸೇನಾ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆಂಬ ಆರೋಪವನ್ನು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News